ಐತಿಹಾಸಿಕ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಇದೀಗ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ. ಬರದನಾಡು ಎಂಬ ಹಣೆಪಟ್ಟಿ ಹೊತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗಕ್ಕೆ ಮುನ್ನುಡಿ ಬರೆಯಲಾಗಿದೆ. ನೀರಾವರಿ, ಕೃಷಿ ಮತ್ತು ತೋಟಗಾರಿಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆ ಇದೀಗ ಬೃಹತ್ ಕೈಗಾರಿಕೆಗಳ ತವರೂರಾಗುವತ್ತ ಹೆಜ್ಜೆ ಇಟ್ಟಿದೆ.

ನಗರದ ಹೊರವಲಯದ ಮುಳವಾಡ ಕೈಗಾರಿಕಾ ಪ್ರದೇಶ ದಲ್ಲಿ ಬರೋಬ್ಬರಿ 109 ಎಕರೆ ಪ್ರದೇಶದಲ್ಲಿ ₹1,600 ಕೋಟಿ ಬಂಡವಾಳ ಹೂಡಿಕೆಯ ಬೃಹತ್ ಯೋಜನೆಗೆ ಚಾಲನೆ ಸಿಕ್ಕಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಮೂಡಿದ್ದು, ವಿಜಯಪುರ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗುವ ಆಶಾವಾದ ಚಿಗುರೊಡೆದಿದೆ. ಹೇಗಿದೆ ಈ ಕೈಗಾರಿಕಾ ಕ್ರಾಂತಿಯ ಕನಸು? ನೋಡೋಣ ಈ ವಿಶೇಷ ವರದಿ.

ಒಂದು ಕಾಲದಲ್ಲಿ ಬರಗಾಲ, ಉದ್ಯೋಗದ ಕೊರತೆ ಹಾಗೂ ಕೈಗಾರಿಕೆಗಳ ಅಭಾವದಿಂದ ಗುರುತಿಸಿಕೊಂಡಿದ್ದ ವಿಜಯಪುರ ಜಿಲ್ಲೆಯಲ್ಲಿ ಇದೀಗ ಬದಲಾವಣೆ ಯ ಗಾಳಿ ಬೀಸುತ್ತಿದೆ. 2009ರಲ್ಲೇ ಮುಳವಾಡ ಕೈಗಾರಿಕಾ ಪ್ರದೇಶ ದಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನವಾಗಿದ್ದರೂ, ವರ್ಷಗಳ ಕಾಲ ಕೈಗಾರಿಕೆಗಳ ಸ್ಥಾಪನೆ ಯಾಗಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಸಚಿವ ಎಂ.ಬಿ. ಪಾಟೀಲ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಇದೀಗ ರಿಲಯನ್ಸ್ ಸಮೂಹದ ಕ್ಯಾಂಪಾ ಕೋಲಾ ಘಟಕಕ್ಕೆ ಭೂಮಿಪೂಜೆ ನೆರವೇರಿದೆ.
109 ಎಕರೆ ವಿಶಾಲ ಪ್ರದೇಶದಲ್ಲಿ ₹1,600 ಕೋಟಿ ಬಂಡವಾಳ ದೊಂದಿಗೆ ತಲೆ ಎತ್ತಲಿರುವ ಈ ಘಟಕದಿಂದ 2,000 ನೇರ ಉದ್ಯೋಗಗಳು ಹಾಗೂ 3,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಮೂಲಕ ಜಿಲ್ಲೆಯ ಯುವಜನತೆಗೆ ಉದ್ಯೋಗದ ಹೊಸ ಭರವಸೆ ಮೂಡಿದೆ.

ಮೊದಲ ಆದ್ಯತೆ ಭೂಮಿ ಕಳೆದುಕೊಂಡ ರೈತ ಕುಟುಂಬಗಳ ಸದಸ್ಯರಿಗೆ, ನಂತರ 25 ಕಿಲೋಮೀಟರ್ ವ್ಯಾಪ್ತಿಯ ಅರ್ಹರಿಗೆ ಹಾಗೂ ಜಿಲ್ಲೆಯ ಪ್ರತಿಭಾವಂತರಿಗೆ ಉದ್ಯೋಗ ನೀಡಬೇಕು. ವಿಶೇಷವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇಕಡಾ 100ರಷ್ಟು ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕೆಂದು ಸೂಚಿಸಿದ್ದಾರೆ. ಇನ್ನು ಕ್ಯಾಂಪಾ ಕೋಲಾ ಮಾತ್ರ ವಲ್ಲದೆ ಹಿಂದೂಸ್ಥಾನ್ ಕೋಕಾ- ಕೋಲಾ, ವಿಂಗ್ಸ್ ವಿಟೇರಾ, ಹೈಟೆಕ್ ಫೈಬ್ಸ್, ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಟೋನ್ಬೋ ಇಮೇಜಿಂಗ್ ಸೇರಿ ದಂತೆ ಹಲವು ಕಂಪನಿಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಜಿಲ್ಲೆಯ ದಾಳಿಂಬೆ, ನಿಂಬೆ, ದ್ರಾಕ್ಷಿ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳನ್ನು ಬಳಸಿಕೊಂಡು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೂ ವಿಪುಲ ಅವಕಾಶಗಳಿವೆ. ಕೃಷಿ ಮತ್ತು ಕೈಗಾರಿಕೆ ಎರಡೂ ಕ್ಷೇತ್ರಗಳು ಕೈಜೋಡಿಸಿದರೆ ವಿಜಯಪುರದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.
ಒಟ್ಟಿನಲ್ಲಿ, ಬಾರಾಮತಿ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕನಸಿಗೆ ಇದೀಗ ಕೈಗಾರಿಕೆಗಳ ಮೂಲಕ ಹೊಸ ಬಲ ಸಿಕ್ಕಿದೆ. ಬರಗಾಲದ ನಾಡು ಎಂಬ ಹಣೆಪಟ್ಟಿಯಿಂದ ಹೊರಬಂದು, ಉದ್ಯೋಗ, ಬಂಡವಾಳ ಹೂಡಿಕೆ ಹಾಗೂ ಕೈಗಾರಿಕಾ ಬೆಳವಣಿಗೆಯ ಹೊಸ ಗುರುತಿನತ್ತ ವಿಜಯಪುರ ಜಿಲ್ಲೆ ಸಾಗುತ್ತಿದೆ. ಮುಳವಾಡದಲ್ಲಿ ಕ್ಯಾಂಪಾ ಕೋಲಾ ಘಟಕಕ್ಕೆ ನಡೆದ ಭೂಮಿಪೂಜೆ ಕೇವಲ ಒಂದು ಕೈಗಾರಿಕೆಯ ಆರಂಭವಲ್ಲ, ಬದಲಾಗಿ ಜಿಲ್ಲೆಯ ಭವಿಷ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಯಾಗಿದೆ. ಇಷ್ಟು ದಿನ ಕೈಗಾರಿಕೆಗಳಿಗಾಗಿ ಕಾಯುತ್ತಿದ್ದ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಈಗ ನಿಜವಾದ ಕೈಗಾರಿಕಾ ಕ್ರಾಂತಿ ಶುರುವಾಗಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್ 24×7,
ವಿಜಯಪುರ
