ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ ಹಿನ್ನೀರಿನಲ್ಲಿ ಇಂದು ಭಕ್ತರ ದಂಡೇ ಹರಿದು ಬಂದಿದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಹಿನ್ನೀರಿನಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುವ ಮೂಲಕ ಭಕ್ತಿ ಭಾವ ಮೆರೆದರು. ನೆರೆಯ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ದುರ್ಗಾದೇವಿ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರು, ಜಾತ್ರೆಯ ಬಳಿಕ ಆಲಮಟ್ಟಿಗೆ ಭೇಟಿ ನೀಡಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಪುಣ್ಯಸ್ನಾನ ಮಾಡಿದರು.

ನೂರಾರು ವಾಹನಗಳಲ್ಲಿ ಆಗಮಿಸಿದ ಭಕ್ತರು ನದಿಯಲ್ಲಿ ಸ್ನಾನ ಮಾಡಲು ಮುಗಿಬಿದ್ದ ದೃಶ್ಯ ಕಂಡುಬಂತು. ಆದರೆ, ಪುಣ್ಯಸ್ನಾನಕ್ಕೆ ಆಗಮಿಸಿದ ಭಕ್ತರ ಸುರಕ್ಷತೆ ಮಾತ್ರ ಆತಂಕಕ್ಕೆ ಕಾರಣವಾಗಿದೆ. ಯಾವುದೇ ಸಮರ್ಪಕ ಸುರಕ್ಷತಾ ಕ್ರಮಗಳಿಲ್ಲದೆ ಭಕ್ತರು ನದಿಗಿಳಿದು ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ನದಿಯ ಆಳ ಹಾಗೂ ನೀರಿನ ಹರಿವಿನ ಬಗ್ಗೆ ಅರಿವಿಲ್ಲದೆ ಜನರು ನೀರಿಗಿಳಿಯುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಇನ್ನೊಂದೆಡೆ, ಭಕ್ತರ ವಾಹನಗಳ ದಟ್ಟಣೆಯಿಂದ ಗದ್ದನಕೇರಿಯಿಂದ ಆಲಮಟ್ಟಿ ಡ್ಯಾಂವರೆಗೆ ವಾಹನಗಳ ಸಾಲು ಕಂಡುಬಂತು. ಗದ್ದನಕೇರಿ– ಬಾಗಲಕೋಟೆ–ಶಿರೂರು–ಹೊಸೂರು–ಆಲಮಟ್ಟಿ ಮಾರ್ಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಏಕಕಾಲಕ್ಕೆ ನೂರಾರು ವಾಹನಗಳು ಸಂಚರಿಸಿದ ಪರಿಣಾಮ ಇತರೆ ವಾಹನ ಸವಾರರು ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಕೆಲವರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಿಳಂಬವಾಗಿ ತಮ್ಮ ಗಮ್ಯಸ್ಥಾನ ತಲುಪುವಂತಾಯಿತು. ಒಟ್ಟಿನಲ್ಲಿ, ಭಕ್ತರ ಪುಣ್ಯಸ್ನಾನದ ಸಂಭ್ರಮದ ನಡುವೆ ಭಕ್ತರ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಸಂಬಂಧಪಟ್ಟ ಇಲಾಖೆಗಳ ಮುಂದಿರುವ ಪ್ರಮುಖ ಸವಾಲಾಗಿದೆ.
