BALLARI

ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪಾದಯಾತ್ರೆ; ಕಾಡಾ ಅಧಿಕಾರಿಗಳ ವಿರುದ್ಧ ಆಕ್ರೋಶ

Share

ಕಾಲುವೆಗಳಿಗೆ ಡಿಸೆಂಬರ್ 15ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರು ಬೀದಿಗಿಳಿದಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ ಆರಂಭವಾಗಿರುವ ರೈತರ ಬೃಹತ್ ಪಾದಯಾತ್ರೆ ಇದೀಗ ಹೊಸಪೇಟೆ ತಲುಪಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಡಿಸೆಂಬರ್ 15ರವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ ರೈತರು ಹಮ್ಮಿಕೊಂಡಿರುವ ಪಾದಯಾತ್ರೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಲುಪಿದೆ. ಕಂಪ್ಲಿ, ರಾಮಸಾಗರ, ಬುಕ್ಕಸಾಗರ ಹಾಗೂ ಕಮಲಾಪುರ ಮಾರ್ಗವಾಗಿ ಸಾಗಿ ಬಂದ ರೈತರು ಗಾಳೆಮ್ಮನ ಗುಡಿಯಲ್ಲಿ ತಂಗಿದ್ದರು. ಹೊಸಪೇಟೆಗೆ ಆಗಮಿಸಿದ ಅನ್ನದಾತರು ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಇಂದು ಮಧ್ಯಾಹ್ನ 3 ಗಂಟೆಗೆ ಗಾಳೆಮ್ಮನ ಗುಡಿಯಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನತ್ತ ರೈತರು ತಮ್ಮ ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ. ಬೆಳೆಗಳ ರಕ್ಷಣೆಗಾಗಿ ಡಿಸೆಂಬರ್ 15ರವರೆಗೆ ನೀರು ಬಿಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ, ಸಮಸ್ಯೆಗೆ ಸ್ಪಂದಿಸಬೇಕಾದ ಕಾಡಾ (CADA) ಅಧಿಕಾರಿಗಳು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ರೈತರು, ಅಧಿಕಾರಿಗಳ ನಡೆ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

Tags:

error: Content is protected !!