ಬಳ್ಳಾರಿ ಜಿಲ್ಲೆಯ ಕುಡತಿನಿ BTPS ನಲ್ಲಿ ಭೀಕರ ದುರ್ಘಟನೆ ನಡೆದಿದೆ. ಸುರಕ್ಷಿತಾ ಪರಿಕರಗಳಿಲ್ಲದೆ ಕೆಲಸ ಮಾಡಿಸುತ್ತಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 27 ವರ್ಷದ ಯುವ ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದು, ಕಾರ್ಮಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿದ್ದ ರಭಸಕ್ಕೆ ಯುವ ಕಾರ್ಮಿಕನ ದೇಹ ಎರಡು ತುಂಡಾಗಿದೆ.
ಬಳ್ಳಾರಿ ಜಿಲ್ಲೆ ಕುಡತಿನಿಯ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ನಲ್ಲಿ (BTPS) ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಗೋವಿಂದಪ್ಪ (27) ಎಂಬವರು ನಿನ್ನೆ ರಾತ್ರಿ ಕಲ್ಲಿದ್ದಲು ಸಾಗಿಸುವ ಬೆಲ್ಟ್ ಮೇಲೆ ನಿಂತು ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬಿದ್ದ ರಭಸಕ್ಕೆ ಗೋವಿಂದಪ್ಪ ಅವರ ದೇಹ ಎರಡು ತುಂಡಾಗಿದ್ದು, ಸ್ಥಳದಲ್ಲೇ ಭೀಕರ ಸಾವು ಸಂಭವಿಸಿದೆ. ಯಾವುದೇ ಸುರಕ್ಷಿತಾ ಕಿಟ್ (Safety Kit) ಅಥವಾ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡದೆ ಕಾರ್ಮಿಕರಿಂದ ಅಪಾಯಕಾರಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು, ಇದು ಸಂಪೂರ್ಣವಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹಾಗೂ ಕಾರ್ಮಿಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಡತಿನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
