Kagawad

ರಾಷ್ಟ್ರಸಂತ ಆಚಾರ್ಯ ವಿದ್ಯಾನಂದ ಮುನಿ ಸ್ಮರಣಾರ್ಥ ಶೇಡಬಾಳದಲ್ಲಿ ₹2.50 ಕೋಟಿ ವೆಚ್ಚದ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ

Share

ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಸುಪುತ್ರರಾಗಿರುವ, ಜೈನ ಸಮಾಜದ ರಾಷ್ಟ್ರಸಂತ ಹಾಗೂ ಅಹಿಂಸಾ ತತ್ವದ ಪ್ರತಿಪಾದಕರಾದ ಶ್ವೇತಪಿಚ್ಛಾಚಾರಿ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರ ಸ್ಮರಣಾರ್ಥವಾಗಿ ಸುಮಾರು ₹2.50 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.

ಶೇಡಬಾಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನವದೆಹಲಿಯ ಕುಂದಕುಂದ ಭಾರತಿ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಜೈನ್, ಕಾರ್ಯದರ್ಶಿ ಅನಿಲ್ ಜೈನ್, ಕೋಶಾಧ್ಯಕ್ಷ ವಿವೇಕ್ ಜೈನ್ ಹಾಗೂ ಸಹ ಕೋಶಾಧ್ಯಕ್ಷ ರಾಜೇಂದ್ರ ಜೈನ್ ಅವರ ಪ್ರಮುಖ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳೊಂದಿಗೆ ಸ್ಮಾರಕ ಕಟ್ಟಡದ ಅಡಿಗಲ್ಲು ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಜೈನ್, “ರಾಷ್ಟ್ರಸಂತ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರು ವಿಶ್ವಶಾಂತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಸಂತರು. ಅವರ ಆದರ್ಶಗಳು ಇಂದಿನ ಬಾಲಕರಿಗೆ ಹಾಗೂ ಯುವಜನತೆಗೆ ಸದಾ ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ಸುಮಾರು ₹2.50 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲು ಯೋಜಿಸಲಾಗಿದೆ. ಸ್ಮಾರಕದಲ್ಲಿ ಅವರ ಚರಣಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಈ ಮಹತ್ವದ ಕಾರ್ಯ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು,” ಎಂದು ಕರೆ ನೀಡಿದರು.

ಟ್ರಸ್ಟ್‌ನ ಕೋಶಾಧ್ಯಕ್ಷ ವಿವೇಕ್ ಜೈನ್ ಮಾತನಾಡಿ, “ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರು ತೋರಿಸಿಕೊಟ್ಟ ಮಾರ್ಗದಲ್ಲಿ ಸಮಾಜ ಮುನ್ನಡೆಯುವಂತೆ ಹಾಗೂ ಇಂದಿನ ಯುವಜನತೆಗೆ ಪ್ರೇರಣೆ ನೀಡುವಂತಹ ಯೋಜನೆಗಳನ್ನು ರೂಪಿಸುವುದೇ ನವದೆಹಲಿಯ ಕುಂದಕುಂದ ಭಾರತಿ ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ,” ಎಂದು ಹೇಳಿದರು.

ಸಮಾರಂಭದಲ್ಲಿ ಆರ್ಯಿಕಾ ಗುರುವಾಣಿ ಮಾತಾಜಿ, ಸುಮತಿಶ್ರೀ ಮಾತಾಜಿ, ವಿಶಾಲಾಕ್ಷಿ ಮಾತಾಜಿ ಹಾಗೂ ನಮಿತಸಾಗರ ಮುನಿ ಮಹಾರಾಜರ ದಿವ್ಯ ಸಾನ್ನಿಧ್ಯವಿತ್ತು. ಪಾವನ ವರ್ಷಾಯೋಗ ಚಾತುರ್ಮಾಸ ವಿಸರ್ಜನೆ ನಿಮಿತ್ತ ಪಿಂಚಿ ಪ್ರದಾನ ಕಾರ್ಯಕ್ರಮವೂ ನೆರವೇರಿತು.

ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್‌ನ ಉಪಾಧ್ಯಕ್ಷರು ಹಾಗೂ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರ ಸ್ಮಾರಕ ಸಮಿತಿಯ ಸಂಚಾಲಕರಾದ ಶೀತಲಗೌಡ ಪಾಟೀಲ ಮಾತನಾಡಿ, “ರಾಷ್ಟ್ರಸಂತ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರು ಶೇಡಬಾಳದ ಸುಪುತ್ರರಾಗಿದ್ದು, ಜೈನ ಸಮಾಜದ ಏಳಿಗೆಗಾಗಿ ದೇಶಾದ್ಯಂತ ಸಂಚರಿಸಿ ಅಹಿಂಸೆ ಹಾಗೂ ಧಾರ್ಮಿಕ ತತ್ವಗಳ ಕುರಿತು ಜನಜಾಗೃತಿ ಮೂಡಿಸಿದ ಮಹಾನ್ ಗುರುಗಳಾಗಿದ್ದಾರೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸ್ಮಾರಕ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ. ಕುಂದಕುಂದ ಭಾರತಿ ಸಂಸ್ಥೆಯವರು ಈ ಕಾರ್ಯಕ್ಕೆ ಮುಂದಾಗಿದ್ದು, ಇದಕ್ಕೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡಲು ನಾವು ಸಿದ್ಧರಿದ್ದೇವೆ,” ಎಂದು ತಿಳಿಸಿದರು.

ಬೈಟ್

ಬೆಳಿಗ್ಗೆ ಶಾಂತಿಸಾಗರ ಆಶ್ರಮದ ಪದ್ಮ ಆನೆಯ ನೇತೃತ್ವದಲ್ಲಿ ಮೆರವಣಿಗೆಯ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಬಳಿಕ ಶಾಂತಿನಾಥ ಜೈನ ಮಂದಿರದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಮಾಜದ ಪ್ರತಿಷ್ಠಾಚಾರ್ಯರಾದ ಅಜಿತ್ ಕುಮಾರ್ ಉಪಾಧ್ಯೆ, ಆನಂದ ಉಪಾಧ್ಯೆ, ಭರತ್ ಉಪಾಧ್ಯೆ, ಬಾಹುಬಲಿ ಉಪಾಧ್ಯೆ ಸೇರಿದಂತೆ ಇತರ ಅರ್ಚಕರು ವಿಧಿವತ್ತಾಗಿ ಪೂಜೆ ನೆರವೇರಿಸಿ, ಅತಿಥಿಗಳಿಂದ ಅಡಿಗಲ್ಲು ಪೂಜೆ ಮಾಡಿಸಿದರು.

ಸಮಾರಂಭದಲ್ಲಿ ಆಚಾರ್ಯಶ್ರೀ ವಿದ್ಯಾನಂದ ಸ್ಮಾರಕ ಸಮಿತಿಯ ಸದಸ್ಯರು, ಶೇಡಬಾಳ ಬ್ಯಾಂಕಿನ ಸಂಚಾಲಕ ಭರತ್ ಪಾಟೀಲ, ಅಭಿಯಂತರ ಅನಿಲ್ ಕನವಾಡೆ, ಮಹಾವೀರ ಲಗಾರೆ, ನಿಮ್ಮಗೊಂಡ ಪಾಟೀಲ, ಶಾಂತಿಸಾಗರ ಆಶ್ರಮದ ಅಧ್ಯಕ್ಷ ರಾಜು ನಾಂದ್ರೆ ಹಾಗೂ ವಿದ್ಯಾನಂದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ನಾಂದ್ರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪಾವನ ವರ್ಷಾಯೋಗ ಚಾತುರ್ಮಾಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಶ್ರೀಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿಯ ಮಹಿಳಾ ಸದಸ್ಯರು, ಚಕ್ರೇಶ್ವರ ಮಹಿಳಾ ಮಂಡಳ ಹಾಗೂ ವಿದ್ಯಾನಂದ ಮಹಿಳಾ ಮಂಡಳದ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸುಕುಮಾರ್ ಬನ್ನುರೆ

ಇನ್ ನ್ಯೂಸ್, ಕಾಗವಾಡ

Tags:

error: Content is protected !!