ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಸಂಸ್ಕೃತಿಯ ಪ್ರತೀಕವೇ ಶ್ರೀ ಭುವನೇಶ್ವರಿ ದೇವಿ. ಕನ್ನಡಿಗರ ಪಾಲಿಗೆ ಭುವನೇಶ್ವರಿ ದೇವಿಯು ಕೇವಲ ದೇವತೆಯಲ್ಲ, ಕನ್ನಡ ನಾಡಿನ ತಾಯಿ, ನಾಡಿನ ಅಸ್ಮಿತೆ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದಾಳೆ. ಗಡಿಭಾಗದ ಮಂಗಸೂಳಿ ಗ್ರಾಮದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರೆಲ್ಲರೂ ಒಗ್ಗೂಡಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ ಹೇಳಿದರು.

ರವಿವಾರ ಬೆಳಗ್ಗೆ ಮಂಗಸೂಳಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಎಲ್ಲ ಶಾಲೆಗಳ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳ ಉಪಸ್ಥಿತಿಯಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಕಂದಾಯ ನಿರೀಕ್ಷಕ ಎಂ.ಬಿ. ಮುಲ್ಲಾ, ಪಿಎಸ್ಐ ರಾಘವೇಂದ್ರ ಖೋತ್ ಸೇರಿದಂತೆ ಗಣ್ಯರು ತಾಯಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮವು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಗ್ರಾಮವಾಗಿದೆ. ಇಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿರುವುದರಿಂದ ಈ ಹಿಂದೆ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಕೆಲವರು ಹಿಂದೇಟು ಹಾಕುತ್ತಿದ್ದರು. ಆದರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ಕನ್ನಡ ಮತ್ತು ಮರಾಠಿ ಭಾಷಿಕರನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಬೆಳಗ್ಗೆ ಸರ್ಕಾರಿ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳು, ಸರ್ಕಾರಿ ಪ್ರೌಢಶಾಲೆ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ರಾಜ್ಯೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಿದರು. ಬಳಿಕ ತೆರೆದ ವಾಹನದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಭವ್ಯ ಮೆರವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಆವರಣಕ್ಕೆ ತರಲಾಯಿತು. ಅಲ್ಲಿ ವಿದ್ಯಾರ್ಥಿಗಳಿಂದ ನಾಡಗೀತೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಮಾರಂಭದ ವಿಶೇಷವೆಂದರೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ, ಅಶೋಕ ಪಿಕೆಪಿಎಸ್ ಅಧ್ಯಕ್ಷ ಮುಕುಂದ ಪೂಜಾರಿ, ಕರವೇ ಅಧ್ಯಕ್ಷ ದತ್ತಾತ್ರೇಯ ಪೂಜಾರಿ, ಸಂಘಟನೆಯ ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಜಯ್ ಸೂರ್ಯವಂಶಿ, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ವರನಟ ಡಾ. ರಾಜಕುಮಾರ್ ಅವರ ಜನಪ್ರಿಯ ಗೀತೆಯಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ದೃಶ್ಯವನ್ನು ಕಂಡ ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.
ರಾಜ್ಯೋತ್ಸವದ ಯಶಸ್ಸಿಗಾಗಿ ಕರವೇ ಕಾರ್ಯಕರ್ತರಾದ ದಿನೇಶ್ ಕೊರವಿ, ಸುಪ್ರೀತ್ ಪೂಜಾರಿ, ಆನಂದ್ ಪೂಜಾರಿ, ಕಪಿಲ್ ಮಗದುಮ್, ಸಚಿನ್ ಪಾಟೀಲ, ಚಿದಾನಂದ ಮಾಳಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಭರತ್ ಮಾಳಿ, ಸಂಜೆ ಮಾಂಗುರೆ, ಪ್ರಮೋದ್ ಪೂಜಾರಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ. ಕದಂ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪಿ.ಆರ್. ಜಾಧವ್, ಎ.ಬಿ. ಶಿರಹಟ್ಟಿ, ಎ.ಆರ್. ಜಮಾದಾರ್, ರಾಮಚಂದ್ರ ಪಾಟೀಲ, ಸಿ.ಎಸ್. ಕುಂಬಾರ, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು ವಿಶೇಷವಾಗಿ ಶ್ರಮಿಸಿದರು.
ಇದೇ ಸಂದರ್ಭದಲ್ಲಿ ಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯದ ಕ್ರೀಡಾಂಗಣದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಶಿಕ್ಷಕರು ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ರೀತಿ ಶೇಡಬಾಳ, ಶಿರಗುಪ್ಪಿ, ಜುಗೂಳ, ಐನಾಪುರ, ಉಗಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕನ್ನಡಾಭಿಮಾನಿಗಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸುಕುಮಾರ ಬನ್ನುರೆ*
ಇನ ನ್ಯೂಸ ಕಾಗವಾಡ
