Kagawad

ಉಗಾರ-ಕುಡಚಿ ಸೇತುವೆ ಮೇಲೆ ರೈತರ ರಸ್ತೆ ತಡೆ: ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತ

Share

ಕಬ್ಬು ಬೆಳೆಗಾರರ ಪರವಾಗಿ ಹೋರಾಟ ನಡೆಸುತ್ತಿರುವ ಹಸಿರು ಸೇನೆ ರೈತ ಸಂಘಟನೆಯ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರನ್ನು ಬೆಳಗಾವಿ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ, ಕಾಗವಾಡ ತಾಲೂಕಿನಾದ್ಯಂತ ಕಬ್ಬು ಬೆಳೆಗಾರರು ಉಗ್ರ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.

ಗುರುವಾರ ಮಧ್ಯಾಹ್ನ ಕಾಗವಾಡ ತಾಲೂಕಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ರೈತರು ದಿಢೀರ್ ಪ್ರತಿಭಟನೆ ಆರಂಭಿಸಿದರು. ಇದರ ಪರಿಣಾಮವಾಗಿ ಸಾಂಗ್ಲಿ–ಬೆಳಗಾವಿ, ಸಾಂಗ್ಲಿ–ಜಮಖಂಡಿ ಹಾಗೂ ಸಾಂಗ್ಲಿ–ವಿಜಯಪುರ ಮಾರ್ಗಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ನೂರಾರು ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಕಾಗವಾಡ ತಾಲೂಕಿನ ಉಗಾರ, ಐನಾಪುರ, ಶೇಡಬಾಳ ಹಾಗೂ ಮಂಗಸೂಳಿ ಗ್ರಾಮಗಳ ಪ್ರಮುಖ ರಸ್ತೆಗಳಲ್ಲೂ ರೈತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಉರಿ ಬಿಸಿಲನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಕುಳಿತ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಹೋರಾಟಗಾರ ಅಜಿತ್ ಚೌಗುಲೆ, ರೈತರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ಮುಖಂಡರನ್ನು ಬಂಧಿಸುವ ಮೂಲಕ ಸರ್ಕಾರ ದೊಡ್ಡ ತಪ್ಪು ಮಾಡಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ನೆರವು ನೀಡುವ ಬದಲು, ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುತ್ತಿರುವ ಮುಖಂಡರನ್ನು ಬಂಧಿಸಿರುವುದು ಖಂಡನೀಯ. ಬಂಧಿತ ರೈತ ಮುಖಂಡರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಹಾಗೂ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಉಗಾರ–ಕುಡಚಿ ಮಧ್ಯೆ ಕೃಷ್ಣಾ ನದಿಗೆ ನಿರ್ಮಿಸಿರುವ ಸೇತುವೆಯ ಎರಡೂ ಬದಿಗಳಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಮುನ್ಸೂಚನೆಯಿಲ್ಲದೆ ದಿಢೀರನೆ ರಸ್ತೆ ತಡೆ ನಡೆಸಿದ್ದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ರಸ್ತೆಯಲ್ಲೇ ಪರದಾಡುವಂತಾಯಿತು.

Tags:

error: Content is protected !!