ಮುಂಭಾಗದಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ, ಕಬ್ಬು ತುಂಬಿದ ಟ್ರ್ಯಾಕ್ಟರ್ಯೊಂದು ನಿಯಂತ್ರಣ ತಪ್ಪಿ ನೇರವಾಗಿ ಮನೆಗೆ ನುಗ್ಗಿದ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.

ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ. ಎರಡು ಟ್ರ್ಯಾಲಿಗಳಲ್ಲಿ ಕಬ್ಬು ತುಂಬಿಕೊಂಡು ಜವಾಹರ ಸಕ್ಕರೆ ಕಾರ್ಖಾನೆಯ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್, ಮುಂಭಾಗದಲ್ಲಿದ್ದ ಮತ್ತೊಂದು ವಾಹನವನ್ನು ತಪ್ಪಿಸುವ ಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸದಲಗಾ ನಿವಾಸಿ ಶೆಗಣುಸಿ ಎಂಬುವವರ ಮನೆಗೆ ನುಗ್ಗಿದೆ.
ಟ್ರ್ಯಾಕ್ಟರ್ ಮನೆಗೆ ನುಗ್ಗಿದ ವೇಳೆಯಲ್ಲಿ ಮನೆಯ ಮುಂಭಾಗದಲ್ಲಿ ಎರಡು ಜಾನುವಾರುಗಳನ್ನು ಕಟ್ಟಲಾಗಿತ್ತು. ಅದೃಷ್ಟವಶಾತ್ ಟ್ರ್ಯಾಕ್ಟರ್ ಜಾನುವಾರುಗಳಿಗೆ ತಾಗದೇ ಪಕ್ಕದಲ್ಲೇ ನುಗ್ಗಿದ್ದರಿಂದ ಯಾವುದೇ ಜೀವಹಾನಿ ಅಥವಾ ಜಾನುವಾರುಗಳಿಗೆ ಗಾಯಗಳಾಗಿಲ್ಲ. ಇದರಿಂದಾಗಿ ಸಂಭಾವ್ಯ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಈ ಇಡೀ ಘಟನೆಯ ಭಯಾನಕ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
