Chikkodi

ಅನ್ಯ ಜಾತಿಯ ಯುವಕನೊಂದಿಗೆ ಮಗಳ ಮದುವೆ ಮಾಡಿಸಿದ್ದಕ್ಕೆ ಜ್ಯೋತಿಷಿಯ ಭೀಕರ ಹತ್ಯೆ

Share

ಮಗಳ ಮದುವೆಯನ್ನು ಅನ್ಯ ಜಾತಿಯ ಯುವಕನೊಂದಿಗೆ ಮಾಡಿಸಿದ್ದಾನೆಂಬ ದ್ವೇಷದಿಂದ ಜ್ಯೋತಿಷಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾನಕಾಪುರ ಗ್ರಾಮದ ಬಳಿ ನಡೆದಿದೆ.

ಮಹಾರಾಷ್ಟ್ರದ ಇಚಲಕರಂಜಿ ಮೂಲದ ಜ್ಯೋತಿಷಿ ಮಂದಾರ್ ಅಜಿತ್ ರಾಂಡೆ (35) ಕೊಲೆಯಾದ ದುರ್ದೈವಿ. ಬಾಬಾಸೋ ದೀಪಕ್ ಮಕ್ದುಮ್ ಕೊಲೆ ಮಾಡಿದ ಆರೋಪಿಯಾಗಿದ್ದು, ಸದಲಗಾ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಈ ಕುರಿತು ವಿಸ್ತೃತ ಮಾಹಿತಿ ನೀಡಿದ್ದಾರೆ.

ಕಳೆದ ಜನವರಿ 13 ರಂದು ಆರೋಪಿ ಬಾಬಾಸೋ ದೀಪಕ್ ಮಕ್ದುಮ್ ಅವರ ಮಗಳು ಮನೆಯಿಂದ ಓಡಿಹೋಗಿ ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾಗಿದ್ದಳು. ಈ ವಿವಾಹವನ್ನು ಜ್ಯೋತಿಷಿ ಮಂದಾರ್ ರಾಂಡೆಯೇ ಮಾಡಿಸಿಕೊಟ್ಟಿದ್ದಾರೆ ಎಂದು ಆರೋಪಿ ತೀವ್ರವಾಗಿ ದ್ವೇಷ ಸಾಧಿಸುತ್ತಿದ್ದ. ಈ ಕೋಪದಿಂದ ಜ್ಯೋತಿಷಿಯ ಹತ್ಯೆಗೆ ಪಕ್ಕಾ ಪ್ಲಾನ್ ಮಾಡಿದ್ದನು.

ಅಕ್ಟೋಬರ್ 30 ರಂದು ಮದುವೆ ಮುಹೂರ್ತ ನಿಗದಿಯಿದೆ ಎಂದು ಬೇರೆ ನಂಬರ್‌ನಿಂದ ಜ್ಯೋತಿಷಿ ಮಂದಾರ್ ರಾಂಡೆ ಅವರಿಗೆ ಆರೋಪಿ ಕರೆ ಮಾಡಿದ್ದಾನೆ. ಮುಹೂರ್ತದ ಮಾತುಕತೆಗಾಗಿ ನಿಪ್ಪಾಣಿ ತಾಲೂಕಿನ ಮಾನಕಾಪುರ ಗ್ರಾಮಕ್ಕೆ ಜ್ಯೋತಿಷಿಯನ್ನು ಕರೆಸಿಕೊಂಡಿದ್ದಾನೆ. ಸ್ಥಳಕ್ಕೆ ಬರುತ್ತಿದ್ದಂತೆ ಜ್ಯೋತಿಷಿಯ ಕಣ್ಣಿಗೆ ಕಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದನು.

ಈ ಭೀಕರ ಹತ್ಯೆ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

Tags:

error: Content is protected !!