Kagawad

ಕಾಗವಾಡ ತಾಲೂಕ ಕಟ್ಟಡ ಕಾರ್ಮಿಕರ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪ್ರತಿಭಟನೆ

Share

ದಿನನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಾಗವಾಡ ತಾಲೂಕ ಕಟ್ಟಡ ಕಾರ್ಮಿಕರ ಅಭಿವೃದ್ಧಿ ನಿರ್ಮಾಣ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ ಹದಿಮನಿ ಅವರಿಗೆ ಮನವಿ ಸಲ್ಲಿಸಿ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಕಾಗವಾಡ ತಾಲೂಕ ಕಟ್ಟಡ ಕಾರ್ಮಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಅಷ್ಪಕ್ ಮುಲ್ಲಾ ಹಾಗೂ ಹಿರಿಯ ಸಂಸ್ಥಾಪಕ ಅಧ್ಯಕ್ಷ ಅರುಣ್ ಜೋಶಿ ಅವರ ನೇತೃತ್ವದಲ್ಲಿ ಸಂಘದ ಕಾರ್ಯಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ರಾಣಿ ಚೆನ್ನಮ್ಮ ವೃತ್ತ ತಲುಪಿ, ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ತೆರಳಿತು. ಬಳಿಕ ತಹಶೀಲ್ದಾರ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಸಂಸ್ಥಾಪಕ ಅಧ್ಯಕ್ಷ ಅರುಣ್ ಜೋಶಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 400 ಕಟ್ಟಡ ಕಾರ್ಮಿಕರಿದ್ದು, ಅವರಲ್ಲಿ 230 ಜನ ಗೌಂಡಿಗಳು, 70 ಜನ ಸೆಂಟ್ರಿಂಗ್ ಕೆಲಸಗಾರರು, 50 ಜನ ಪೇಂಟಿಂಗ್ ಕಾರ್ಮಿಕರು, 50 ಜನ ಬಡಗಿಗಳು ಹಾಗೂ ಇನ್ನಿತರ ಕೂಲಿ ಕಾರ್ಮಿಕರು ದಿನನಿತ್ಯ ದುಡಿದು ಜೀವನ ಸಾಗಿಸುತ್ತಿದ್ದಾರೆ. ಸದ್ಯ ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೂ ಸ್ಥಳೀಯ ಕಟ್ಟಡ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ₹5,000 ಆರ್ಥಿಕ ನೆರವು ನೀಡಬೇಕು, ಆಹಾರ ಕಿಟ್ ವಿತರಿಸಬೇಕು, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಅಲ್ಲದೆ, ಕಾರ್ಮಿಕರ ಮಕ್ಕಳ ಮದುವೆಗಾಗಿ ಸ್ಥಳೀಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಹಣ ಕೇಳಲಾಗುತ್ತಿದೆ. ಕಾರ್ಮಿಕ ಇಲಾಖೆಯ ಡಾಟಾ ಆಪರೇಟರ್ ಕಾರ್ಮಿಕರಿಗೆ ಸಮರ್ಪಕ ಸೇವೆ ನೀಡುತ್ತಿಲ್ಲ. ಅವರನ್ನು ವರ್ಗಾವಣೆ ಮಾಡಬೇಕು. ಮಹಿಳೆಯರಿಗೂ ಕಾರ್ಮಿಕ ಕಾರ್ಡ್ ವಿತರಿಸಬೇಕು. ಕೆಲಸದ ಸಂದರ್ಭದಲ್ಲಿ ಕಾರ್ಮಿಕರು ಗಾಯಗೊಂಡರೆ ತಕ್ಷಣ ಚಿಕಿತ್ಸೆ ದೊರೆಯುವಂತೆ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಬೇಡಿಕೆಗಳ ಕುರಿತು ಅರುಣ್ ಜೋಶಿ, ಸಂಘದ ಅಧ್ಯಕ್ಷ ಅಷ್ಪಕ್ ಮುಲ್ಲಾ, ಅಮೀನ್ ಶೇಖ್ ಹಾಗೂ ಜಯ ಕರ್ನಾಟಕ ಸಂಘದ ಅಧ್ಯಕ್ಷ ಬಸವರಾಜ್ ಮಗದುಮ್ ಅವರು ತಹಶೀಲ್ದಾರ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಡಾಲೆ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆಗಳನ್ನು ವಿವರಿಸಿದರು.

ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲ್ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಪ್ರತಿದಿನ ಕೂಲಿ ಮಾಡಿ ಜೀವನ ಸಾಗಿಸುವ ಬಡ ಕಾರ್ಮಿಕ ಕುಟುಂಬಗಳಿಗೆ ನೆರವಾಗಲು ಮುಂದೆ ಬರುತ್ತಿಲ್ಲ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. ಸ್ಥಳೀಯ ಅಧಿಕಾರಿಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ನೀಡಲು ಹಣ ಕೇಳುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. ಕಾರ್ಮಿಕರ ಈ ಸಮಸ್ಯೆಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರ ಪರವಾಗಿ ಉಗ್ರ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಡಾಲೆ ಅವರು ಕಾರ್ಮಿಕ ಸಂಘದ ಸಮಸ್ಯೆಗಳನ್ನು ಆಲಿಸಿ, ಕಾರ್ಮಿಕರಿಗೆ ಸಮರ್ಪಕ ಸೇವೆ ನೀಡದ ಡಾಟಾ ಆಪರೇಟರ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸಂಘದ ಇತರ ಬೇಡಿಕೆಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ರವೀಂದ್ರ ಹದಿಮನಿ ಮಾತನಾಡಿ, ಕಾರ್ಮಿಕರ ಬೇಡಿಕೆಗಳನ್ನು ಜಿಲ್ಲೆಯ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕಾರ್ಮಿಕರ ಸಮಸ್ಯೆಗಳಿಗೆ ವೈಯಕ್ತಿಕವಾಗಿ ಸ್ಪಂದಿಸುವುದರ ಜೊತೆಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕಾಗವಾಡ ತಾಲೂಕ ಕಟ್ಟಡ ಕಾರ್ಮಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಅಷ್ಪಕ್ ಮುಲ್ಲಾ, ಉಪಾಧ್ಯಕ್ಷ ಒಪ್ಪೋಟ್ ಕೋತ್, ಮಮುಲಾಲ್ ಜಮಖಾನೆ, ಸಂಜೀವ್ ಕೋರೆ, ಅಮರ್ ಶಿಂದೆ, ಪ್ರೊ. ಅಶೋಕ್ ಪಾಟೀಲ್, ಯಾಕಲೇ ಮಹೇಶ್ ಮಡಿವಾಳ, ಪ್ರಕಾಶ್ ಧೊಂಡಾರೆ, ಮೌಲಾ ಮೈಸಾಳೆ ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಭಾಗವಹಿಸಿದ್ದರು.

ಅಧಿಕಾರಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಒಂದು ತಿಂಗಳೊಳಗಾಗಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ

Tags:

error: Content is protected !!