ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಟ್ರಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ನೆಲಕ್ಕೆ ಬಿದ್ದ ಬೈಕ್‌ನಲ್ಲಿ ತಕ್ಷಣವೇ ಬೆಂಕಿ ಹೊತ್ತಿಕೊಂಡು ಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿರಿಗುಪ್ಪ ತಾಲೂಕಿನ ಬಗ್ಗೂರ ಗ್ರಾಮದ ಕ್ರಾಸ್ ಬಳಿ ಈ ದಾರುಣ ದುರ್ಘಟನೆ ನಡೆದಿದೆ. ಸಿರಿಗುಪ್ಪದಿಂದ ಕೆ. ಸೂಗೂರು ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಂಭುಲಿಂಗಪ್ಪ ಹಾಗೂ ಹಿಂಬದಿ ಸವಾರ ಲೋಕಪ್ಪ ಎಂಬುವವರೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ದುರ್ದೈವಿಗಳು. ಇಬ್ಬರೂ ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟ್ರಾಕ್ಟರ್ ಶರವೇಗದಲ್ಲಿ ಬೈಕಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರು ರಸ್ತೆಗೆ ಬಿದ್ದ ಕ್ಷಣದಲ್ಲೇ ಬೈಕಿನ ಪೆಟ್ರೋಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದ ಕೂಡಲೇ ಸಿರಿಗುಪ್ಪ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
