ಹುಬ್ಬಳ್ಳಿ : ಎದೆ ಎತ್ತರಕ್ಕೆ ಬೆಳೆದ ಮಗ ಏಕಾಏಕಿ ಪಾರ್ಟ್ಟೈಂ ಜಾಬ್ ಮಾಡುತ್ತಿದ್ದ ಸ್ಥಳದಿಂದ ನಾಪತ್ತೆಯಾಗಿದ್ದು, ಮನೆಯ ಹಿರಿ ಮಗನ ಸುಳಿವಿಗಾಗಿ ಹೆತ್ತವರು ಬೀದಿ ಬೀದಿ ಅಲೆಯುತ್ತಿರುವ ಘಟನೆ ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದ ನಿವಾಸಿಗಳಾದ ಶೈನಾಜ್ ಹಾಗೂ ಅಲ್ಲಾಭಕ್ಷ ನಾದಾಫ್ ದಂಪತಿಯ ಮೊದಲನೇ ಮಗ ಮಹಮ್ಮದ್ ಯಾಸೀನ್ ನಾಪತ್ತೆಯಾದ ಯುವಕ. 16 ವರ್ಷ ವಯಸ್ಸಿನ ಈ ಯುವಕ, 5 ಅಡಿ 2 ಇಂಚು ಎತ್ತರ, ತೆಳ್ಳನೆಯ ಮೈಕಟ್ಟು ಹಾಗೂ ಸಾಧಾರಣ ಕಪ್ಪು ಬಣ್ಣ ಹೊಂದಿದ್ದಾನೆ. ಮನೆಯಿಂದ ತೆರಳುವ ವೇಳೆ ಕಪ್ಪು ಮತ್ತು ಬಿಳಿ ಬಣ್ಣದ ಹಾಫ್ ಶರ್ಟ್ ಧರಿಸಿದ್ದ ಈತ, ಗಾಮನಗಟ್ಟಿ-ನವನಗರ ರಸ್ತೆಯ ಜೋಶಿ ಫಾರ್ಮ್ ಸಮೀಪದ ವಾಷಿಂಗ್ ಸೆಂಟರ್ನಿಂದ ನಾಪತ್ತೆಯಾಗಿದ್ದಾನೆ. ನಾಪತ್ತೆಯಾಗುವ ವೇಳೆ ಈತ ಇಬ್ಬರು ಅಪರಿಚಿತ ಯುವಕರೊಂದಿಗೆ ತೆರಳಿರುವುದಾಗಿ ತಂದೆ-ತಾಯಿ ತಿಳಿಸಿದ್ದು, ಈ ಕುರಿತು ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೋಟೋದಲ್ಲಿ ಕಾಣುತ್ತಿರುವ ಯುವಕ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 6360943769 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಮಗನ ಬರುವಿಕೆಗಾಗಿ ತಂದೆ-ತಾಯಿ ನಿತ್ಯ ಕಣ್ಣೀರು ಹಾಕುತ್ತಿದ್ದು, ಸಾರ್ವಜನಿಕರ ಸ್ಪಂದನೆ ಇವರಿಗೆ ಅಗತ್ಯವಾಗಿದೆ.
