Kagawad

ಕಾಗವಾಡದಲ್ಲಿ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಶ್ರದ್ಧಾ-ಭಕ್ತಿಯಿಂದ ಆಚರಣೆ

Share

ಭಾರತೀಯ ಸಾಹಿತ್ಯ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಮಹರ್ಷಿ ವಾಲ್ಮೀಕಿ ಅವರು ಮಹತ್ವದ ಸ್ಥಾನ ಪಡೆದಿದ್ದಾರೆ. ಅವರು ರಚಿಸಿದ ಪವಿತ್ರ ಮಹಾಕಾವ್ಯ ರಾಮಾಯಣದ ಆದರ್ಶಗಳು ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದು ಶೇಡಬಾಳ ಸನ್ಮತಿ ವಿದ್ಯಾಲಯದ ಶಿಕ್ಷಕರಾದ ಹನುಮಂತ ನಾಯ್ಕ್ ಹೇಳಿದರು.

ಸೋಮವಾರ ಕಾಗವಾಡ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸಕರಾಗಿ ಮಾತನಾಡಿ, “ರಾಮಾಯಣದಲ್ಲಿ ಶ್ರೀರಾಮನ ಜೀವನ, ಆದರ್ಶ, ಧರ್ಮನಿಷ್ಠೆ, ಸತ್ಯ, ತ್ಯಾಗ, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಮನೋಜ್ಞವಾಗಿ ವಿವರಿಸಲಾಗಿದೆ. ಸುಮಾರು 24 ಸಾವಿರ ಶ್ಲೋಕಗಳು ಹಾಗೂ ಏಳು ಕಾಂಡಗಳನ್ನು ಒಳಗೊಂಡಿರುವ ರಾಮಾಯಣವನ್ನು ಪ್ರತಿಯೊಬ್ಬರೂ ಓದಿ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಸಬೇಕು,” ಎಂದು ಕರೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ವಾಲಿ ಮಾತನಾಡಿ, “ಪೌರಾಣಿಕ ಕಥನಗಳ ಪ್ರಕಾರ, ವಾಲ್ಮೀಕಿ ಮಹರ್ಷಿಗಳು ಆರಂಭಿಕ ಜೀವನದಲ್ಲಿ ರತ್ನಾಕರ ಎಂಬ ಹೆಸರಿನಿಂದ ಪರಿಚಿತರಾಗಿದ್ದರು. ನಾರದ ಮಹರ್ಷಿಗಳ ಮಾರ್ಗದರ್ಶನದಿಂದ ತಪಸ್ಸು, ಆತ್ಮಾವಲೋಕನ ಮತ್ತು ಭಗವಂತನ ಧ್ಯಾನದ ಮೂಲಕ ಮಹರ್ಷಿಗಳಾಗಿ ಪರಿವರ್ತನೆಗೊಂಡರು. ವ್ಯಕ್ತಿಯು ತನ್ನ ತಪ್ಪುಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಬದಲಾವಣೆ ಸಾಧ್ಯ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ,” ಎಂದರು.

ಗ್ರೇಡ್-2 ತಹಶೀಲ್ದಾರ್ ಶ್ರೀಮತಿ ರಶ್ಮಿ ಜಕಾತೆ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳ ಕುರಿತು ಪರಿಶೀಲನೆ ನಡೆಸಿ ಶೀಘ್ರದಲ್ಲಿಯೇ ಸೂಕ್ತ ನಿರ್ಣಯ ಕೊಡುವ ಭರವಸೆ ನೀಡಿದರು. ಕ್ಷೇತ್ರದ ಶಿಕ್ಷಣಾಧಿಕಾರಿ ಚೆನ್ನಿಂಗ ರಾಮಯ್ಯ, ಸಹಾಯಕ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ, ಸಮಾಜ ಕಲ್ಯಾಣ ಅಧಿಕಾರಿ ಎಸ್. ಎ. ಮಾಂಗ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ಎಂ. ಎನ್. ಕಾಂಬಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂಜೀವಕುಮಾರ್ ಸದಲಗೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಪ್ರಸನ್ನಾ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.

ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ್ ತಳವಳ್ಕರ್ ಅವರು ಮಹರ್ಷಿ ವಾಲ್ಮೀಕಿ ಅವರ ತತ್ತ್ವಗಳ ಕುರಿತು ಮಾಹಿತಿ ನೀಡಿದರು.

ವಾಲ್ಮೀಕಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ನಾಯಕ್, ಉಪಾಧ್ಯಕ್ಷ ಸದಾಶಿವ ನಾಯ್ಕ್, ಎ. ರಾಮ ನಾಯಕ್, ರಮೇಶ್ ದೊಡ್ಮನಿ, ರಮೇಶ್ ಪೂಜಾರಿ, ನ್ಯಾಯವಾದಿ ಪ್ರವೀಣ್ ಕೆಂಪವಾಡೆ, ಅಶೋಕ್ ಮಾಕನ್ನವರ್, ಫಿರಾಪ್ಪ ನಾಯಕ್ ಹಾಗೂ ಸಮಾಜದ ಎಲ್ಲ ಸದಸ್ಯರು, ಮಹಿಳೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ವಾಲ್ಮೀಕಿ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾಗವಾಡದಲ್ಲಿ ಗುರುತಿಸಲಾದ ವಾಲ್ಮೀಕಿ ಭವನ ನಿರ್ಮಾಣದ ಸ್ಥಳದಿಂದ ರಾಣಿ ಚೆನ್ನಮ್ಮ ವೃತ್ತದ ಮೂಲಕ ಕಾರ್ಯಕ್ರಮದ ಸ್ಥಳದವರೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅಲ್ಲದೆ, ಬೆಳಿಗ್ಗೆ ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿಇಒ ಕಚೇರಿ, ಪೊಲೀಸ್ ಠಾಣೆ, ಶಿವಾನಂದ ಮಹಾವಿದ್ಯಾಲಯ ಹಾಗೂ ತಾಲೂಕಿನ ಶೇಡಬಾಳ, ಉಗಾರ್, ಶಿರಗುಪ್ಪಿ, ಮುಗುಳು, ಮಂಗಸೂಳಿ, ಐನಾಪುರ, ಮೊಳೆ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳು ಮತ್ತು ಸಂಸ್ಥೆಗಳಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Tags:

error: Content is protected !!