Vijaypura

ತುಳಜಾಭವಾನಿ ದರ್ಶನಕ್ಕೆ ಭಕ್ತರ ಪಾದಯಾತ್ರೆ ಆರಂಭ

Share

ಶಾರದೀಯ ನವರಾತ್ರಿ ಸಂಭ್ರಮ ಭಕ್ತಿಭಾವದಿಂದ ಮುಕ್ತಾಯಗೊಂಡ ಬೆನ್ನಲ್ಲೇ, ಮಹಾರಾಷ್ಟ್ರದ ತುಳಜಾಪುರದಲ್ಲಿರುವ ಶ್ರೀ ತುಳಜಾಭವಾನಿ ಅಮ್ಮನವರ ದರ್ಶನ ಪಡೆಯಲು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರ ಪಾದಯಾತ್ರೆ ಆರಂಭವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ವಿವಿಧ ತಾಲೂಕುಗಳಿಂದ ಹಾಗೂ ಬಾಗಲಕೋಟೆ, ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ತಾಯಿಯ ದರ್ಶನಕ್ಕಾಗಿ ಪಾದಯಾತ್ರೆಯ ಮೂಲಕ ತುಳಜಾಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ.

ನವರಾತ್ರಿ ಉತ್ಸವದ ಬಳಿಕವೂ ತುಳಜಾಭವಾನಿ ಅಮ್ಮನವರ ಮೇಲಿನ ಭಕ್ತರ ಶ್ರದ್ಧೆ, ನಂಬಿಕೆ ಮತ್ತು ಭಕ್ತಿ ಕಡಿಮೆಯಾಗಿಲ್ಲ. ಕುಟುಂಬ ಸಮೇತರಾಗಿ, ಸ್ನೇಹಿತರೊಂದಿಗೆ ಹಾಗೂ ಭಜನಾ ತಂಡಗಳ ಮೂಲಕ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಕೈಯಲ್ಲಿ ಭಗವಾಧ್ವಜ, ತುಟಿಯಲ್ಲಿ ದೇವಿಯ ನಾಮಸ್ಮರಣೆ, ಮನದಲ್ಲಿ ತಾಯಿಯ ದರ್ಶನದ ಹಂಬಲ ಹೊತ್ತು ಭಕ್ತರು ತಮ್ಮ ಯಾತ್ರೆ ಮುಂದುವರಿಸುತ್ತಿದ್ದಾರೆ. ಮಾರ್ಗಮಧ್ಯೆ ವಿಶ್ರಾಂತಿ ಪಡೆಯುತ್ತಾ, ಪರಸ್ಪರ ಸಹಕಾರ ನೀಡುತ್ತಾ ಸಾಗುತ್ತಿರುವ ಭಕ್ತರ ದೃಶ್ಯಗಳು ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಕಳೆಗಟ್ಟಿಸಿವೆ. ಇನ್ನೂ ಪಾದಯಾತ್ರೆಯಲ್ಲಿ ಸಾಗುವ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕನಸು ಫೌಂಡೇಶನ್ ವತಿಯಿಂದ ಬಸವರಾಜ್ ಹೂಗಾರ್ ಅವರ ನೇತೃತ್ವದಲ್ಲಿ ವಿಶೇಷ ಸೇವಾ ಕಾರ್ಯ ಆರಂಭಿಸಲಾಗಿದೆ. ಆಲಮೇಲ ಸಮೀಪದ ಹಲಸಂಗಿ ಕ್ರಾಸ್‌ನ ಆರ್‌ಟಿಒ ಚೆಕ್‌ಪೋಸ್ಟ್ ಬಳಿ, ವಿರಾಮ್ ಹೋಟೆಲ್ ಎದುರು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವೈದ್ಯಕೀಯ ಸೇವೆಯನ್ನು ಆರಂಭಿಸಲಾಗಿದೆ. ದೂರದ ಊರುಗಳಿಂದ ಕಾಲ್ನಡಿಗೆಯಲ್ಲಿ ಸಾಗುವ ಭಕ್ತರಿಗೆ ಆಯಾಸ, ಕಾಲುನೋವು, ನಿರ್ಜಲೀಕರಣ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.

ಇಂತಹ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಭಕ್ತರ ಆರೋಗ್ಯದ ಕಾಳಜಿ ವಹಿಸುವುದರ ಜೊತೆಗೆ ಮಾನವೀಯತೆ, ಸೇವಾ ಮನೋಭಾವ ಮತ್ತು ಧಾರ್ಮಿಕ ಸಹಬಾಳ್ವೆಯ ಸಂದೇಶವನ್ನು ಸಾರುವ ಕಾರ್ಯಕ್ಕೆ ಕನಸು ಫೌಂಡೇಶನ್ ಮುಂದಾಗಿದೆ. ಒಂದೆಡೆ ತಾಯಿಯ ದರ್ಶನಕ್ಕಾಗಿ ಭಕ್ತರ ನಿರಂತರ ಪಾದಯಾತ್ರೆ, ಮತ್ತೊಂದೆಡೆ ಯಾತ್ರಿಕರ ನೆರವಿಗೆ ಧಾವಿಸುತ್ತಿರುವ ಸೇವಾ ಸಂಸ್ಥೆಗಳು—ಇವೆಲ್ಲವೂ ಭಕ್ತಿ ಮತ್ತು ಮಾನವೀಯತೆಯ ಸುಂದರ ಸಂಗಮಕ್ಕೆ ಸಾಕ್ಷಿಯಾಗಿವೆ. ಒಟ್ಟಿನಲ್ಲಿ, ತುಳಜಾಭವಾನಿ ಅಮ್ಮನವರ ದರ್ಶನದ ಹಾದಿಯಲ್ಲಿ ಭಕ್ತರ ಹೆಜ್ಜೆಗಳು ಮುಂದುವರಿದಿದ್ದು, ಪಾದಯಾತ್ರಿಗಳ ಸೇವೆಯಲ್ಲಿ ತೊಡಗಿರುವ ಸಂಘ-ಸಂಸ್ಥೆಗಳ ಕಾರ್ಯ ಭಕ್ತರ ಪ್ರಯಾಣಕ್ಕೆ ನೆರವಾಗುತ್ತಿದೆ.

Tags:

error: Content is protected !!