hubbali

ವಿಧಾನ ಪರಿಷತ್ತೂ ವಿಧಾನಸಭೆಯಂತಾಗಿದೆ: ಬಸವರಾಜ ಹೊರಟ್ಟಿ

Share

ಹಿಂದೆ ವಿಧಾನ ಪರಿಷತ್‌ಗೆ ಮುತ್ಸದ್ದಿಗಳು ಆಯ್ಕೆಯಾಗುತ್ತಿದ್ದರು. ಆದರೆ, ಇತ್ತೀಚೆಗೆ ವಿಧಾನ ಪರಿಷತ್ತೂ ವಿಧಾನಸಭೆಯಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಫಾತಿಮಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳೂ ಹಣ ನೀಡಿ ಮತ ಪಡೆದು ಆಯ್ಕೆಯಾಗುತ್ತಿರುವುದು ನೋವಿನ ಸಂಗತಿ. ಶಿಕ್ಷಕರು ಇಂತಹ ಆಮಿಷಗಳಿಂದ ದೂರವಿದ್ದು, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಪ್ರತಿ ಚುನಾವಣೆಯಲ್ಲೂ ಹೊಸದಾಗಿ ಹೆಸರು ನೋಂದಾಯಿಸುವ ಪ್ರಕ್ರಿಯೆ ಸರಿಯಲ್ಲ. ಒಮ್ಮೆ ಪದವಿ ಪಡೆದವರು ಜೀವನಪೂರ್ತಿ ಪದವೀಧರರಾಗಿರುತ್ತಾರೆ. ಹೀಗಾಗಿ, ಪ್ರತಿ ಬಾರಿ ಹೊಸದಾಗಿ ಹೆಸರು ನೋಂದಾಯಿಸುವ ಬದಲು ಹೆಸರು ಸೇರ್ಪಡೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಕೆಲವರು ವಿಡಿಯೊ ಹಾಗೂ ಪೆನ್‌ಡ್ರೈವ್ ಬಳಸಿ ಬೆದರಿಸಿರಬಹುದು. ಅಥವಾ ಅದು ಎಐ ಮೂಲಕ ಸೃಷ್ಟಿಸಿದ ವಿಡಿಯೊ ಆಗಿರಬಹುದು. ಇಂತಹ ಕೃತ್ಯಗಳು ರಾಜಕಾರಣಕ್ಕೆ ನಾಚಿಕೆ ತರುವಂತಿವೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ ಮುಖ್ಯಮಂತ್ರಿಗಳ ಆಡಳಿತವನ್ನು ಸ್ಮರಿಸಿದ ಅವರು, ಕೆಂಗಲ್ ಹನುಮಂತರಾಯರು ವಿಧಾನಸೌಧ ನಿರ್ಮಿಸಿದರು, ರಾಮಕೃಷ್ಣ ಹೆಗಡೆ ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಿದರು, ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಡೆಸಿದರು. ಆದರೆ, ಈಗಿನ ಸರ್ಕಾರ ಸ್ಟಿಂಗ್ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

Tags:

error: Content is protected !!