Chikkodi

ಮಲಿಕವಾಡ ಗ್ರಾಮದಲ್ಲಿ ರಿಂಗ್ ರೋಡ್ ಯೋಜನೆ ರದ್ದುಗೊಳಿಸಲು ಆಗ್ರಹ

Share

ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಉದ್ದೇಶಿತ ರಿಂಗ್ ರೋಡ್ ಕಾಮಗಾರಿಯನ್ನು ತಕ್ಷಣವೇ ಕೈಬಿಡಬೇಕು ಹಾಗೂ ಗ್ರಾಮವನ್ನು ಯಕ್ಸಂಬಾ ಪಟ್ಟಣಕ್ಕೆ ಸೇರ್ಪಡೆಗೊಳಿಸಬಾರದು ಎಂದು ಆಗ್ರಹಿಸಿ ಮಲಿಕವಾಡ ಗ್ರಾಮಸ್ಥರು ಉಪತಹಶೀಲ್ದಾರ್ ಪರಿಮಳಾ ದೇಶಪಾಂಡೆ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಮಲಿಕವಾಡ ಗ್ರಾಮವು ಸಂಪೂರ್ಣ ಕೃಷಿ ಆಧಾರಿತ ಭೂಮಿಯನ್ನು ಹೊಂದಿದೆ. ಇಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡುವುದರಿಂದ ಫಲವತ್ತಾದ ಕೃಷಿ ಭೂಮಿ ನಾಶವಾಗಿ ರೈತರು ಬೀದಿಗೆ ಬೀಳುವಂತಾಗುತ್ತದೆ. ಅಲ್ಲದೆ, ಗ್ರಾಮವನ್ನು ಯಕ್ಸಂಬಾ ಪಟ್ಟಣಕ್ಕೆ ಸೇರಿಸುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಮತ್ತು ಆಡಳಿತ ಮಂಡಳಿಯು ತಕ್ಷಣವೇ ರಿಂಗ್ ರೋಡ್ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ಮಲಿಕವಾಡವನ್ನು ಯಕ್ಸಂಬಾ ಪಟ್ಟಣಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಉಗ್ರ ಸ್ವರೂಪದ ಹೋರಾಟ ಹಾಗೂ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಲಿಕವಾಡ ಗ್ರಾಮದ ಪ್ರಮುಖರು, ರೈತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!