ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಆಸರೆಯಾಗುವ ಉದ್ದೇಶದಿಂದ ‘ಶ್ರೀಮತಿ ಶಶಿಕಲಾ ಜೊಲ್ಲೆ ವಿದ್ಯಾರ್ಥಿವೇತನ ಪ್ರಶಸ್ತಿ 2027-28’ ಉಪಕ್ರಮವನ್ನು ಘೋಷಿಸಲಾಗಿದೆ. ವೈದ್ಯಕೀಯ (NEET) ಮತ್ತು ಇಂಜಿನಿಯರಿಂಗ್ (JEE) ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ 20 ಅತ್ಯುತ್ತಮ ಪ್ರತಿಭೆಗಳಿಗೆ ಒಟ್ಟು ₹80 ಲಕ್ಷ ಮೌಲ್ಯದ ವಿದ್ಯಾರ್ಥಿವೇತನ ನಿಧಿಯನ್ನು ಮೀಸಲಿಡಲಾಗಿದೆ ಎಂದು ಜೊಲ್ಲೆ ಗ್ರೂಪ್ ಯುವ ಧುರೀಣ ಬಸವಪ್ರಸಾದ ಜೊಲ್ಲೆ ತಿಳಿಸಿದ್ದಾರೆ.
ನಿಪ್ಪಾಣಿ ಸ್ಥಳೀಯ ಶಿಕ್ಷಣ ಸಂಸ್ಥೆಯ ಸಭಾಗೃಹದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಸಂಪೂರ್ಣ ವಿವರ ಹಾಗೂ ಪರೀಕ್ಷಾ ವೇಳಾಪಟ್ಟಿಯನ್ನು ಹಂಚಿಕೊಂಡರು.
ಹಣಕಾಸಿನ ಅಭಾವದಿಂದಾಗಿ ಯಾವುದೇ ಪ್ರತಿಭಾವಂತ ವಿದ್ಯಾರ್ಥಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು.ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಲು ಕಷ್ಟಪಡುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದು.ವೈದ್ಯಕೀಯ ಮತ್ತು ಇಂಜಿನಿಯರಿಂಗ್ ರಂಗದಲ್ಲಿ ಆಸಕ್ತಿಯುಳ್ಳ ಯುವ ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ಪ್ರೋತ್ಸಾಹದ ಮೂಲಕ ಸಬಲರನ್ನಾಗಿ ಮಾಡುವುದು.
ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10:00 ಗಂಟೆಗೆ ಪರೀಕ್ಷೆಗಳನ್ನು ಆಯೋಜಿಸಲಾಗಿದೆ.
22 ನವೆಂಬರ್ 2026 ನಿಪ್ಪಾಣಿ ಮತ್ತು ಚಿಕ್ಕೋಡಿ
29 ನವೆಂಬರ್ 2026 ರಾಯಬಾಗ ಮತ್ತು ಹಾರೂಗೇರಿ
06 ಡಿಸೆಂಬರ್ 2026 ಕಾಗವಾಡ ಮತ್ತು ಅಥಣಿ
13 ಡಿಸೆಂಬರ್ 2026 ಯಮಕನಮರಡಿ ಮತ್ತು ಸಂಕೇಶ್ವರ ನಲ್ಲಿ ಆಯೋಜಿಸಲಾಗಿದೆ.
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಗೂಗಲ್ ಫಾರ್ಮ್ (Google Form) ಮೂಲಕ ಆನ್ಲೈನ್ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಸಂಪರ್ಕ ಸಂಖ್ಯೆಗಳು: ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ 9731309554 ಅಥವಾ 9632987555 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
“ಆರ್ಥಿಕ ಮುಗ್ಗಟ್ಟು ಶೈಕ್ಷಣಿಕ ಸಾಧನೆಗೆ ಎಂದಿಗೂ ಅಡ್ಡಿಯಾಗಬಾರದು. ಜೊಲ್ಲೆ ಗ್ರೂಪ್ನ ಸಂಸ್ಥಾಪಕರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿರುವ ಈ ವಿದ್ಯಾರ್ಥಿವೇತನವು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು
ಬಸವಪ್ರಸಾದ ಜೊಲ್ಲೆ ತಿಳಿಸಿದರು.
