ನಾಡಿನಾದ್ಯಂತ ಸಂಭ್ರಮದಿಂದ ನಡೆದ ಶರನ್ನವರಾತ್ರಿ ಉತ್ಸವಕ್ಕೆ ತೆರೆ ಬಿದ್ದಿದೆ. ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯಲ್ಲಿಯೂ ಶ್ರೀ ಅಂಭಾಭವಾನಿ ತರುಣ ಮಂಡಳದ ವತಿಯಿಂದ ಒಂಬತ್ತು ದಿನಗಳ ಕಾಲ ನಡೆದ ದೇವಿಯ ಆರಾಧನೆ ಭಕ್ತಿಭಾವದಿಂದ ಸಂಪನ್ನಗೊಂಡಿದೆ. ಒಂಬತ್ತು ಬಣ್ಣಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರ ಸಂಭ್ರಮ, ದಾಂಡಿಯಾ ನೃತ್ಯ ಹಾಗೂ ಲಲಿತಾ ಸಹಸ್ರನಾಮ ಪಠಣ ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಇತ್ತ ನವರಾತ್ರಿ ಮುಕ್ತಾಯದ ಬೆನ್ನಲ್ಲೇ ಮಹಾರಾಷ್ಟ್ರದ ತುಳಜಾಪುರ ದಲ್ಲಿರುವ ಶ್ರೀ ತುಳಜಾಭವಾನಿ ಅಮ್ಮನವರ ದರ್ಶನಕ್ಕಾಗಿ ವಿವಿಧ ಭಾಗಗಳಿಂದ ಭಕ್ತರು ಪಾದಯಾತ್ರೆ ಆರಂಭಿಸಿದ್ದಾರೆ. ತಾಯಿಯ ದರ್ಶನದ ಹಂಬಲ ಹೊತ್ತು ಸಾಗುತ್ತಿರುವ ಭಕ್ತರಿಗೆ ಮಾರ್ಗಮಧ್ಯೆ ವಿವಿಧ ಸಂಘ-ಸಂಸ್ಥೆಗಳು ಸೇವೆ ಒದಗಿಸುತ್ತಿವೆ. ಈ ಎರಡೂ ಧಾರ್ಮಿಕ ಸಂಭ್ರಮಗಳ ವಿಶೇಷ ಚಿತ್ರಣ ಇಲ್ಲಿದೆ ನೋಡಿ.
ಹೌದು… ಒಂಬತ್ತು ದಿನಗಳ ಕಾಲ ದೇವಿಯ ನಾಮಸ್ಮರಣೆ… ಮನೆಮನಗಳಲ್ಲಿ ಭಕ್ತಿಯ ಕಂಪನ… ಬಣ್ಣಬಣ್ಣದ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಂಗೊಳಿಸಿದ ಮಹಿಳೆಯರು… ಇದು ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಕಂಡುಬಂದ ಶರನ್ನವರಾತ್ರಿ ವೈಭವ! ಶ್ರೀ ಅಂಭಾಭವಾನಿ ತರುಣ ಮಂಡಳದ ನೇತೃತ್ವದಲ್ಲಿ ನಡೆದ ನವರಾತ್ರಿ ಮಹೋತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಕಾಲೋನಿಯ ಆರಾಧ್ಯ ದೇವಿ ಶ್ರೀ ಅಂಭಾಭವಾನಿಗೆ ವಿಶೇಷ ಪೂಜೆ, ಪುನಸ್ಕಾರ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಭಕ್ತರು ನಾಡಿನ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ನವರಾತ್ರಿಯ ವಿಶೇಷ ಆಕರ್ಷಣೆಯಾಗಿದ್ದ ಒಂಬತ್ತು ದಿನಗಳ ಒಂಬತ್ತು ಬಣ್ಣಗಳ ಉಡುಗೆ ಸಂಪ್ರದಾಯ ಮಹಿಳೆಯರ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದ ಮಹಿಳೆಯರು ದಾಂಡಿಯಾ ಮಾದರಿಯ ನೃತ್ಯದಲ್ಲಿ ಹೆಜ್ಜೆ ಹಾಕಿ ಉತ್ಸವಕ್ಕೆ ಮತ್ತಷ್ಟು ಕಳೆ ತಂದರು.
ಇನ್ನು ದಾಂಡಿಯಾದಂತಹ ಸಂಗೀತದ ಲಯಕ್ಕೆ ಹೆಜ್ಜೆ ಹಾಕಿದ ಮಹಿಳೆಯರು… ಸಾಮೂಹಿಕ ಪ್ರಾರ್ಥನೆಯಲ್ಲಿ ಒಂದಾದ ಭಕ್ತರು… ಲಲಿತಾ ಸಹಸ್ರನಾಮದ ಪಠಣದೊಂದಿಗೆ ದೇವಿಯ ಮಹಿಮೆಯನ್ನು ಸ್ಮರಿಸಿದ ಭಕ್ತಸಮೂಹ… ಗಚ್ಚಿನಕಟ್ಟಿ ಕಾಲೋನಿಯ ನವರಾತ್ರಿ ಉತ್ಸವವು ಧಾರ್ಮಿಕ ಶ್ರದ್ಧೆಯ ಜೊತೆಗೆ ಸಾಂಸ್ಕೃತಿಕ ಒಗ್ಗಟ್ಟಿಗೂ ಸಾಕ್ಷಿಯಾಯಿತು. ಪ್ರತಿದಿನ ನಡೆದ ಲಲಿತಾ ಸಹಸ್ರನಾಮ ಪಠಣವು ಉತ್ಸವದ ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸಿತು. ಜಗನ್ಮಾತೆ ಶ್ರೀ ಲಲಿತಾ ತ್ರಿಪುರಸುಂದರಿಯ ನಾಮಸ್ಮರಣೆ ಯೊಂದಿಗೆ ಭಕ್ತರು ತಾಯಿಯ ಕೃಪೆಗಾಗಿ ಪ್ರಾರ್ಥಿಸಿದರು. ಹೀಗೆ ಒಂಬತ್ತು ದಿನಗಳ ಕಾಲ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಸಂಭ್ರಮದಿಂದ ಕಂಗೊಳಿಸಿದ ನವರಾತ್ರಿ ಉತ್ಸವಕ್ಕೆ ತೆರೆ ಬಿದ್ದಿದೆ. ಇದೀಗ ಭಕ್ತರ ಚಿತ್ತ ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿಪೀಠ ತುಳಜಾಪುರದತ್ತ ಹರಿದಿದೆ. ತುಳಜಾಭವಾನಿ ಅಮ್ಮನವರ ದರ್ಶನಕ್ಕಾಗಿ ಭಕ್ತರು ಪಾದಯಾತ್ರೆಯ ಮೂಲಕ ಸಾಗುತ್ತಿದ್ದು, ತಾಯಿಯ ದರ್ಶನದ ಹಂಬಲದೊಂದಿಗೆ ಭಕ್ತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಇನ್ ನ್ಯೂಜ್ ವರದಿಗಾರ ವಿಜಯಕುಮಾರ್ ಸಾರವಾಡ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ “ಭಕ್ತಿ ಪಯಣದಿಂದ ಸುದ್ದಿ” ಎಂಬ ಸೇವೆಯ ಮೂಲಕ ಧಾರ್ಮಿಕ ಕ್ಷೇತ್ರಗಳ ವಿಶೇಷ ವರದಿಗಳನ್ನು ನಿಮ್ಮ ಮುಂದಿಡುತ್ತಾ ಬಂದಿದ್ದೇವೆ. ಮಹಾರಾಷ್ಟ್ರದ ತುಳಜಾಪುರದಲ್ಲಿ ನಡೆಯುವ ಪ್ರಮುಖ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು, ಉತ್ಸವಗಳು ಹಾಗೂ ಕೋಜಾಗಿರಿ ಮತ್ತು ಶರದ್ ಹುಣ್ಣಿಮೆಯ ವಿಶೇಷ ಆಚರಣೆಗಳ ಚಿತ್ರಣವನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸಲು ನಿಮ್ಮ ಮೆಚ್ಚಿನ ಇನ್ ನ್ಯೂಜ್ ತಂಡ ಸಜ್ಜಾಗಿದೆ.
ಒಟ್ನಲ್ಲಿ ತುಳಜಾಪುರದ ತಾಯಿಯ ದರ್ಶನದ ಪಾದಯಾತ್ರೆಯವರೆಗೆ… ಭಕ್ತಿ ಮತ್ತು ಸಂಪ್ರದಾಯದ ಈ ಪಯಣದಲ್ಲಿ ನಮ್ಮೊಂದಿಗೆ ನೀವೂ ಹೆಜ್ಜೆ ಹಾಕಿ. ಕಳೆದ ಹತ್ತು ವರ್ಷಗಳಿಂದ “ಭಕ್ತಿ ಪಯಣದಿಂದ ಸುದ್ದಿ” ಎಂಬ ಸೇವೆಯ ಮೂಲಕ ನಿಮ್ಮ ಮನೆಮನೆಗೂ ಧಾರ್ಮಿಕ ಕ್ಷೇತ್ರಗಳ ವಿಶೇಷ ವರದಿಗಳನ್ನು ತಲುಪಿಸುತ್ತಿರುವ ಇನ್ ನ್ಯೂಜ್ ತಂಡಕ್ಕೆ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
