ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಗಾರ ಬುದ್ರುಕ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ದಸರಾ ಹಬ್ಬದ ಅಂಗವಾಗಿ ನವರಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ನವರಾತ್ರಿಯ ಪ್ರಮುಖ ದಿನವಾದ ಮಂಗಳವಾರ, ಅಕ್ಟೋಬರ್ 20ರಂದು ಕೃಷ್ಣಾ ನದಿಯಲ್ಲಿ ಶ್ರೀ ಪದ್ಮಾವತಿ ದೇವಿಯ ಹೊಳೆ ಪೂಜೆ ಕಾರ್ಯಕ್ರಮ ಜರುಗಲಿದೆ. ಸುಮಾರು ಮೂರು ಗಂಟೆಗಳ ಕಾಲ ನಡೆಯುವ ಈ ವಿಶೇಷ ಪೂಜೆಯಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಂದಿರದ ಧರ್ಮಾಧಿಕಾರಿ ಶೀತಲ್ ಗೌಡ ಪಾಟೀಲ್ ತಿಳಿಸಿದ್ದಾರೆ.
ರವಿವಾರ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ನವಿಲುಗರಿಗಳಿಂದ ವಿಶೇಷ ಅಲಂಕಾರ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಹೊಳೆ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶೀತಲ್ ಗೌಡ ಪಾಟೀಲ್ ಆಹ್ವಾನ ನೀಡಿದರು.

ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿವಿಧ ಬಗೆಯ ವಿಶೇಷ ಅಲಂಕಾರ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಶ್ವೇತ ಪುಷ್ಪಗಳಿಂದ ಪೂಜೆ, ವರ್ಣರಂಜಿತ ಹೂವುಗಳ ಅಲಂಕಾರ, ಕಮಲ ಪುಷ್ಪಗಳಿಂದ ಪೂಜೆ, ಹಸಿರು ಎಲೆಗಳಿಂದ ಅಲಂಕಾರ, ನಿಂಬೆಹಣ್ಣಿನ ಅಲಂಕಾರ, ವಿವಿಧ ಹಣ್ಣುಗಳಿಂದ ವಿಶೇಷ ಪೂಜೆ ಹಾಗೂ ಮುತ್ತಿನ ಹಾರಗಳಿಂದ ಅಲಂಕಾರ ಸೇರಿದಂತೆ ಪ್ರತಿದಿನ ವಿಭಿನ್ನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ. ರವಿವಾರ ನವಿಲುಗರಿಗಳಿಂದ ಹಾಗೂ ಸೋಮವಾರ ಬಳೆಗಳಿಂದ ದೇವಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು.
ಮಂಗಳವಾರ ಅಕ್ಟೋಬರ್ 20ರಂದು ಕೃಷ್ಣಾ ನದಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಮಹಾಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಿರಾರು ಲೀಟರ್ ಹಾಲು, ವಿವಿಧ ಹಣ್ಣುಗಳು, ಶ್ರೀಫಲ ಸೇರಿದಂತೆ ವಿವಿಧ ದ್ರವ್ಯಗಳನ್ನು ಬಳಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಅಪರೂಪದ ಧಾರ್ಮಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ ಉಗಾರ ಗ್ರಾಮದ ಜನರು ಜಾತಿ, ಮತ, ಪಂಥದ ಭೇದವಿಲ್ಲದೆ ಒಂದಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದು ಇಡೀ ಗ್ರಾಮದ ಹಬ್ಬವಾಗಿದ್ದು, ಎಲ್ಲ ಭಕ್ತರಿಗೂ ಅಗತ್ಯ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಸಹಕರಿಸುತ್ತಿದ್ದಾರೆ ಎಂದು ಶೀತಲ್ ಗೌಡ ಪಾಟೀಲ್ ತಿಳಿಸಿದರು.
ನವರಾತ್ರಿಯ ಅಂಗವಾಗಿ ಪ್ರತಿದಿನ ಸಂಜೆ ಶ್ರೀ ಪದ್ಮಾವತಿ ದೇವಿಗೆ ಪಂಚಾಮೃತ ಅಭಿಷೇಕ, ಅಖಂಡ ದೀಪೋತ್ಸವ ಹಾಗೂ ವಿವಿಧ ಅಭಿಷೇಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯುತ್ತಿವೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಉಗಾರದ ಆದರ್ಶ ಮಹಿಳಾ ಮಂಡಳದ ಅಧ್ಯಕ್ಷೆ ವಿಜಯತಾಯಿ ಪಾಟೀಲ್, ಸವಿತಾ ಪಾಟೀಲ್, ಕಾಂಚನ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಮಹಿಳಾ ಸದಸ್ಯರು ಪ್ರತಿದಿನ ಸಂಜೆ ಮಂದಿರದ ಮುಂಭಾಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ಬುಧವಾರ, ಅಕ್ಟೋಬರ್ 21ರಂದು ಶಿಮೋಲಂಘನ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಲಾಗಿದೆ. ದಿನವಿಡೀ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲ ಸಮಾಜಗಳ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ
