bagalkot

ಮೊಬೈಲ್’ನ ಒಂದು ಸುಳಿವು; ಕೊಲೆಗಾರರಿಗೆ ತಂದಿತು ಕಂಬಿ ಭಾಗ್ಯ..

Share

ಆಸ್ತಿಗಾಗಿ ಹೆತ್ತ ತಾಯಿಯನ್ನೇ ಬೀದಿಗೆ ತಳ್ಳಿದ ಕಟುಕ ಮಕ್ಕಳು! ಅನ್ನ ಹಾಕಿ ಸಾಕಬೇಕಾದ ಕೈಗಳೇ, ಅದೇ ತಾಯಿಯ ಪ್ರಾಣಕ್ಕೆ ಮುಳುವಾದವೆಯೇ?
ದೇವಸ್ಥಾನದಲ್ಲಿ ಆಶ್ರಯ ಪಡೆದು ಮಲಗಿದ್ದ ವೃದ್ಧ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ! ಅಷ್ಟೇ ಅಲ್ಲ, ಪೊಲೀಸರ ದಿಕ್ಕು ತಪ್ಪಿಸಲು ತಾನೇ ತಾಯಿಯ ಮೇಲೆ ಅತ್ಯಾಚಾರವಾಗಿದೆ ಎಂದು ಸುಳ್ಳು ಕಥೆ ಕಟ್ಟಿ ದೂರು ನೀಡಿದ ಕಿರಿಯ ಮಗ ,7 ತಿಂಗಳ ಕಾಲ ನಿಗೂಢವಾಗಿದ್ದ ಭೀಕರ ಕೊಲೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಹೆತ್ತ ತಾಯಿಗೇ ಮುಕ್ತಿ ನೀಡಿದ ಆಸ್ತಿ ವ್ಯಾಮೋಹದ ಕರಾಳ ಮುಖ ಬಯಲಾಗಿದ್ದು ಹೇಗೆ..? ಪೊಲೀಸರ ತನಿಖೆಯಲ್ಲಿ ಬಯಲಾದ ಸ್ಫೋಟಕ ಸತ್ಯಗಳೇನು?ಈ ಕುರಿತು ಒಂದು ಕಂಪ್ಲೀಟ್ ಸ್ಟೋರಿ ಎಲ್ಲಿದೆ ನೋಡಿ….

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಬೀರೇಶ್ವರ ದೇವಸ್ಥಾನದಲ್ಲಿ ಕಳೆದ ಮಾರ್ಚ ತಿಂಗಳದ ನಡೆದಿದ್ದ ಭೀಕರ ಕೊಲೆ ಪ್ರಕರಣದ ರಹಸ್ಯವನ್ನು ಬೀಳಗಿ ಪೊಲೀಸರು ಕೊನೆಗೂ ಬಯಲಿಗೆಳೆದಿದ್ದಾರೆ, ಹೊನ್ನು ಹೆಣ್ಣು ಮಣ್ಣಿಗಾಗಿ ನಡೆದ ಕಾಳಗದಲ್ಲಿ ಸಿಲುಕಿದವರು ತಪ್ಪಿಸಿಕೊಂಡಿದ್ದು ಉದಾಹರಣೆಗಳಿಲ್ಲ, ಅಂಥದ್ದೇ ಒಂದು ಸ್ಟೋರಿ ಈಗ ಬೆಳಕಿಗೆ ಬಂದಿದೆ,ಆಸ್ತಿ ಆಸೆಗೆ ಬಿದ್ದು ಹೆತ್ತ ತಾಯಿಯ ಪ್ರಾಣ ತೆಗೆದ ಪಾಪಿಗಳ ಅಸಲಿ ಮುಖ 7 ತಿಂಗಳ ಬಳಿಕ ಪೊಲೀಸರ ತನಿಖೆಯಲ್ಲಿ ಕಳಚಿದೆ.

ದೇವಸ್ಥಾನದಲ್ಲಿ ಮಲಗಿದ್ದ ತಾಯಿಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ..

ಕೊಲೆ ಮಾಡಿ ಪೊಲೀಸರಿಗೆ ತಾನೇ ದೂರು ನೀಡಿದ್ದ ಕಿರಿಯ ಮಗ..

ಅತ್ತಿಗೆ ಜೊತೆಗೆ ಸೇರಿಕೊಂಡು ಹೆತ್ತ ಅಮ್ಮನನ್ನೇ ಕೊಂದ ಪಾಪಿ..

ಆಸ್ತಿ ವಿಚಾರಕ್ಕೆ ಅಮ್ಮನಿಗೆ ತುತ್ತು ಊಟ ನೀಡದೆ ಹೊರಗೆ ಹಾಕಿದ್ದ ಮಕ್ಕಳು..

ಮೂರ್ನಾಲ್ಕು ವರ್ಷಗಳಿಂದ ಜೋಗಮ್ಮಳಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವೃದ್ಧೆ..

ದೇವಸ್ಥಾನದಲ್ಲೇ ಆಶ್ರಯ, ಕಸ ಗುಡಿಸುವುದೇ ಕಾಯಕ..

7 ತಿಂಗಳ ಬಳಿಕ ಅಸಲಿ ಆರೋಪಿಗಳು ಅಂದರ್..

ಕಳೆದ ಮಾರ್ಚ್ 18, 2026ರಂದು ಇದೇ ಬೀರೇಶ್ವರ ದೇವಸ್ಥಾನದಲ್ಲಿ ಮಲಗಿದ್ದ 65 ವರ್ಷದ ಗೌರವ್ವ ಅಯ್ಯಪ್ಪ ಕೊಡೇಕಲ್ ಎಂಬ ವೃದ್ಧೆಯನ್ನ ಕೊಲೆ ಮಾಡಲಾಗಿತ್ತು. ಮೃತ ಗೌರವ್ವಳಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದ್ರೆ, ಹೆತ್ತು ಹೊತ್ತು ಸಾಕಿ ಸಲುಹಿದ ಮಕ್ಕಳೇ ಆಕೆ ಪಾಲಿಗೆ ಯಮರಾಜಗಿದ್ದಾರೆ. ಇಬ್ಬರೂ ಮಕ್ಕಳು ತಾಯಿಯನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದರು. ಅದಕ್ಕೆ ಕಾರಣ ಪಿತ್ರಾರ್ಜಿತವಾಗಿ ಬಂದ 4 ಎಕರೆ ಜಮೀನು ಹಾಗೂ 2 ಮನೆಗಳು. ಜಮೀನು ವೃದ್ಧೆ ಗೌರವ್ವ ಅವರ ಹೆಸರಿನಲ್ಲೇ ಇತ್ತು. ಆದರೆ, ತಾಯಿಯನ್ನು ನೋಡಿಕೊಳ್ಳದ ಮಕ್ಕಳು, ಜಮೀನಿನಲ್ಲಿ ತಾವೇ ಬೆಳೆ ಬೆಳೆದು ಲಾಭ ಪಡೆಯುತ್ತಿದ್ದರು. ಅಷ್ಟೇ ಅಲ್ಲದೆ, ಆಸ್ತಿಯನ್ನು ನಮ್ಮ ಹೆಸರಿಗೆ ಬಿಟ್ಟುಕೊಡು ಎಂದು ತಾಯಿಯ ಮೇಲೆ ನಿರಂತರವಾಗಿ ಗಲಾಟೆ ನಡೆಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಮಕ್ಕಳು ಸರಿಯಾಗಿ ಊಟವನ್ನೂ ಕೊಡುತ್ತಿರಲಿಲ್ಲ. ನನಗೆ ಹೊಟ್ಟೆತುಂಬಾ ಊಟ ಕೊಡದಿದ್ದರೆ, ನನ್ನನ್ನು ಜೋಪಾನ ಮಾಡಿದವರಿಗೇ ಈ ಆಸ್ತಿ ಬರೆದುಕೊಡುತ್ತೇನೆ ಎಂದು ಗೌರವ್ವ ಹೇಳ್ತಿದ್ದರಂತೆ. ಇದರಿಂದ ಆಕ್ರೋಶಗೊಂಡಿದ್ದ ಕುಟುಂಬಸ್ಥರು, ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರನ್ನು ಮನೆಯಿಂದ ಹೊರಹಾಕಿದ್ದರು. ಹೀಗಾಗಿ, ಗೌರವ್ವ ದೇವಸ್ಥಾನದಲ್ಲೇ ಮಲಗುತ್ತಿದ್ದರು. ಜೋಗಮ್ಮಳಾಗಿ ಭಿಕ್ಷಾಟನೆ ಮಾಡಿ, ದೇವಸ್ಥಾನದ ಕಸ ಗುಡಿಸಿ ತಮ್ಮ ಬದುಕು ಸಾಗಿಸುತ್ತಿದ್ದರು. ಮಕ್ಕಳು ಹಾಗೂ ಸೊಸೆಯ ನಿರಂತರ ತೊಂದರೆ ಕುರಿತು ಗೌರವ್ವ ಹಲವು ಬಾರಿ ಸ್ಥಳೀಯ ಪೊಲೀಸ್ ಠಾಣೆಗಳಿಗೂ ದೂರು ನೀಡಿದ್ದರು.

ಕಳೆದ ಮಾರ್ಚ್ 18, 2026ರ ರಾತ್ರಿ ಎಂದಿನಂತೆ ದೇವಸ್ಥಾನದಲ್ಲಿ ಮಲಗಿದ್ದ ಗೌರವ್ವಳ ತಲೆ ಮೇಲೆ ಕಿರಿಯ ಮಗ ಪಡಿಯಪ್ಪ, ತನ್ನ ಅತ್ತಿಗೆ ಶಾಂತವ್ವಳ ಜೊತೆಗೆ ಸೇರಿಕೊಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ರು. ಕೃತ್ಯದ ಬಳಿಕ ಯಾರ ಮೇಲೂ ಅನುಮಾನ ಬಾರದಂತೆ ನಾಟಕವಾಡಿದ್ದ ಕಿರಿಯ ಮಗನೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ, “ಯಾರೋ ದುಷ್ಕರ್ಮಿಗಳು ನನ್ನ ತಾಯಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ” ಎಂದು ನಕಲಿ ದೂರು ದಾಖಲಿಸಿದ್ದ!

ಪೊಲೀಸರಿಗೆ ಮತ್ತು ಸ್ಥಳೀಯರಿಗೆ ಎಲ್ಲಿಯೂ ಪೊಲೀಸರಿಗೆ ಅನುಮಾನ ಬಾರದಂತೆ ಕಳೆದ 7 ತಿಂಗಳಿಂದ ಈ ಭೂಪರು ಓಡಾಡುತ್ತಿದ್ದರು. ಅಷ್ಟೇ ಅಲ್ಲ, ಸ್ಥಳೀಯರು ಪ್ರಕರಣವನ್ನು ಬೇಗ ಪತ್ತೆಹಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದಾಗ, ಈ ಹಂತಕರೂ ಕೂಡ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ನಾಟಕವಾಡುತ್ತಿದ್ದರು.

ಆದ್ರೆ, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, ಸಿಪಿಐ ಚಂದ್ರಶೇಖರ್ ಹೇರಕಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ರು. ಕೆಲವ ಮೂರೇ ದಿನಗಳಲ್ಲಿ ಪೊಲೀಸರ ತೀವ್ರ ತನಿಖೆಯಲ್ಲಿ ಸತ್ಯ ಹೊರಬಂದಿದ್ದು, ಕೊಲೆಯ ಪ್ರಮುಖ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.. ಹಿರಿಯ ಸೊಸೆ ಶಾಂತವ್ವ ಸದಾಶಿವ ಕೊಡೆಕಲ್, ಕಿರಿಯ ಮಗ ಪಡಿಯಪ್ಪ ಕೊಡೆಕಲ್ ಹಾಗೂ ಹಿರಿಯ ಸೊಸೆಯ ಅಕ್ಕನ ಮಗ ಶಂಕರನೇ ಈ ಕೃತ್ಯದ ಮಾಸ್ಟರ್ ಮೈಂಡ್‌ಗಳು ಎಂಬುದು ಬೆಳಕಿಗೆ ಬಂದಿದೆ.

ಕೊಲೆಗಾರರು ಎಷ್ಟೇ ಚಾಲಾಕಿತನದಿಂದ ಸಾಕ್ಷ್ಯಗಳನ್ನು ಅಳಿಸಿಹಾಕಲು ಯತ್ನಿಸಿದರೂ,ಆ ಒಂದು ಮೊಬೈಲ್ ಫೋನ್ ಅವರ ಸಂಪೂರ್ಣ ಸಂಚನ್ನೇ ಬಯಲು ಮಾಡಿದೆ.ಕೊಲೆ ನಡೆದ ಬಳಿಕ ಪೊಲೀಸರು ತನಿಖೆ ನಡೆಸಿದರೂ, ಆರಂಭದಲ್ಲಿ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ಕುಟುಂಬಸ್ಥರ ಮೇಲೂ ಅನುಮಾನ ಮೂಡಿತ್ತು. ಆದರೆ,ಆರೋಪಿಗಳು ಲೈ ಡಿಟೆಕ್ಷನ್ ಪರೀಕ್ಷೆಗೆ ನಿರಾಕರಿಸಿದ್ದರಿಂದ ತನಿಖೆ ಮತ್ತಷ್ಟು ಗೊಂದಲಕ್ಕೀಡಾಗಿತ್ತು.
ಇದರಿಂದ ಪ್ರಕರಣ ಬಹುತೇಕ ಕಗ್ಗಂಟಾಗಿದ್ದ ಸಂದರ್ಭದಲ್ಲಿ, ಮೃತ ವೃದ್ಧೆಯ ಮೊಬೈಲ್ ಫೋನ್ ಆನ್ ಆಗಿದ್ದು ತನಿಖೆಗೆ ನಿರ್ಣಾಯಕ ತಿರುವು ನೀಡಿತು. ಪೊಲೀಸರು ಫೋನ್‌ನ ಚಲನವಲನವನ್ನು ಟ್ರ್ಯಾಕ್ ಮಾಡಿದಾಗ, ಅದೇ ಗ್ರಾಮದ ಯುವಕನೊಬ್ಬ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿರುವುದು ಪತ್ತೆಯಾಯಿತು.

ಈ ಸುಳಿವಿನ ಬೆನ್ನತ್ತಿದ ತನಿಖಾ ತಂಡ, ಯುವಕನ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸತ್ಯ ಒಂದೊಂದಾಗಿ ಹೊರಬಂತು. ಬಳಿಕ ನಡೆದ ತನಿಖೆಯಲ್ಲಿ ಆರೋಪಿಗಳ ಕೃತ್ಯ ಬಯಲಾಗಿದ್ದು, ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದಿರುವುದು ದೃಢಪಟ್ಟಿತು.
ಒಟ್ಟಿನಲ್ಲಿ, ಒಂದು ಮೊಬೈಲ್ ಫೋನ್ ನೀಡಿದ ಸಣ್ಣ ಸುಳಿವು ಕೊಲೆ ಪ್ರಕರಣದ ಸಂಪೂರ್ಣ ರಹಸ್ಯವನ್ನು ಬಿಚ್ಚಿಟ್ಟಿದೆ. ಇದೀಗ ಕಟುಕರು ಜೈಲು ಸೇರಿದ್ದು, ಪ್ರಕರಣವನ್ನು ಭೇದಿಸಿದ ತನಿಖಾ ತಂಡಕ್ಕೆ ಎಸ್‌ಪಿ ಸಿದ್ದಾರ್ಥ ಗೋಯಲ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

Tags:

error: Content is protected !!