ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಈಶ್ವರಪ್ಪ ಬಾಳಪ್ಪ ಚನ್ನನ್ನವರ ಅವರು ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರ ಅಗಲಿಕೆಯಿಂದ ದೇಶಭಕ್ತರೊಬ್ಬರನ್ನು ಕಳೆದುಕೊಂಡಂತಾಗಿದ್ದು, ತಾಲೂಕಿನಲ್ಲಿ ಶೋಕಮೂಡಿದೆ.
ಖಾನಾಪುರ ತಾಲೂಕಿನಲ್ಲಿ ಸದ್ಯ ಬದುಕುಳಿದಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗುಂಡೇನಟ್ಟಿ ಗ್ರಾಮದ ಈಶ್ವರಪ್ಪ ಬಾಳಪ್ಪ ಚನ್ನನ್ನವರ (95) ಅವರು ವಯೋಸಹಜ ಅನಾರೋಗ್ಯದಿಂದ ಸೆಪ್ಟೆಂಬರ್ 27ರ ರಾತ್ರಿ 10 ಗಂಟೆಗೆ ನಿಧನರಾದರು. ದಶಕಗಳ ಹಿಂದೆಯೇ ಪತ್ಸಿಯನ್ನು ಕಳೆದುಕೊಂಡಿದ್ದ ಇವರು, ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಹಾಗೂ 16 ಜನ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ. ದೇಶಕ್ಕಾಗಿ ಹೋರಾಡಿದ ಹಿರಿಯ ಚೇತನದ ಅಗಲಿಕೆಗೆ ಗಣ್ಯರು ಹಾಗೂ ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.

