ಸಾರ್ವಜನಿಕ ಕೆಲಸ-ಕಾರ್ಯಗಳಲ್ಲಿ ಪಾರದರ್ಶಕತೆ ತರಲು ಸಾರ್ವಜನಿಕರು ಹಾಗೂ ಅಧಿಕಾರಿಗಳು ಜಾಗೃತರಾಗುವುದು ಅತ್ಯಗತ್ಯ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾದರೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು. ಪ್ರಕರಣಗಳ ವಿಲೇವಾರಿಯಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನೆಪ ಹೇಳಿ ಕರ್ತವ್ಯದಿಂದ ನುಣುಚಿಕೊಳ್ಳುವ ಮತ್ತು ಲೋಪ ಎಸಗುವ ಅಧಿಕಾರಿಗಳನ್ನು ಶೀಘ್ರವೇ ಅಮಾನತುಗೊಳಿಸಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒಗೆ ನಿರ್ದೇಶನ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ೪೦,೦೦೦ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಕಾರ್ಯಭಾರ ನಿರ್ವಹಿಸಲು ೫ ಸದಸ್ಯರ ಲೋಕಾಯುಕ್ತ ಪೀಠದ ಅಗತ್ಯವಿದೆ ಹಾಗೂ ಕಲ್ಬುರ್ಗಿ, ಧಾರವಾಡ/ಬೆಳಗಾವಿ ಭಾಗಗಳಲ್ಲೂ ಪೀಠ ವಿಸ್ತರಿಸುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
