Vijaypura

ಹೈದರಾಬಾದ್ ವಿಮೋಚನಾ ಮಹಾನಾಯಕ, ಸ್ವಾಮಿ ರಾಮಾನಂದ ತೀರ್ಥರ ಜಯಂತಿ ಸರಕಾರ ಆಚರಿಸಲಿ -ವಿನೋದ ಖೇಡ

Share

ವಿಜಯಪುರ ಜಿಲ್ಲಾ ಸಂಘ -ಸಂಸ್ಥೆಗಳ ಮುಖಂಡರು ಹೈದ್ರಾಬಾದ್ ವಿಮೋಚನಾ ಚಳುವಳಿ ಪಿತಾಮಹ ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್ 3 ರಂದು ರಾಜ್ಯಾಧ್ಯಂತ ಎಲ್ಲ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ಸರಕಾರದಿಂದ ಜಯಂತಿ ಆಚರಣೆ ಮಾಡಲು ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಕೆ ಆನಂದ ಅವರ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಸಂಘ -ಸಂಸ್ಥೆಗಳ ಒಕ್ಕೂಟದ ಮುಖಂಡರಾದ ವಿನೋದ ಖೇಡ ಅವರು ಸ್ವಾಮಿ ರಾಮಾನಂದ ತೀರ್ಥರೆಂದು ಹೆಸರುವಾಸಿಯಾದ ವೆಂಕಟರಾವ ಖೇಡಗೀಕರ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 3 ಅಕ್ಟೋಬರ್ 1903 ಜನಿಸಿದ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಹೈದರಾಬಾದ್ ಸಂಸ್ಥಾನದ ವಿಮೋಚನಾ ಹೋರಾಟದ ಮಹಾನಾಯಕರಾಗಿ ಸಲ್ಲಿಸಿರುವ ಸೇವೆ ಅಮೋಘವಾಗಿದೆ. ರಾಜ್ಯ ಸರಕಾರ ಅವರ ಜನ್ಮದಿನವಾದ ಅಕ್ಟೋಬರ್ 3ನ್ನು ಸರಕಾರಿ ಜಯಂತಿಯಾಗಿ ಆಚರಿಸಬೇಕು ಎಂದು ಆಗ್ರಹಿಸಿದರು. ವಿಜಯಪುರ ಜಿಲ್ಲಾ 371 ಜೆ ಹೋರಾಟಗಾರ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಅವರು ಮಾತನಾಡಿ
ಹೈದ್ರಾಬಾದ್ ವಿಮೋಚನಾ ಚಳುವಳಿಯ ಅಗ್ರಗಣ್ಯ ನಾಯಕರಾದ ಸ್ವಾಮಿ ರಾಮಾನಂದ ತೀರ್ಥರು ಶಿಕ್ಷಣ ತಜ್ಞರಾಗಿ, ಕಾರ್ಮಿಕ ನಾಯಕರಾಗಿ ಹಾಗೂ ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಧಾರೆಯೆರೆದು ರಾಷ್ಟ್ರವೀರ ಎಂದು ಹೆಸರುವಾಸಿಯಾಗಿದ್ದಾರೆ. ಅಂತಹ ಧೀಮಂತ ನಾಯಕರ ದೇಶಭಕ್ತಿ ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಪ್ರೇರಣಾದಾಯಕ ವಾಗಿವೆ ಆಂಧ್ರಪ್ರದೇಶ, ತೆಲಂಗಾಣ ಸರಕಾರಗಳು ಸ್ವಾಮಿ ರಾಮಾನಂದ ತೀರ್ಥರ ಹೆಸರಲ್ಲಿ ಸ್ಮಾರಕ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಅವರನ್ನು ಗೌರವಿಸುವ ಕಾರ್ಯ ಮಾಡಿವೆ.

ಮಹಾರಾಷ್ಟ್ರ ಸರಕಾರವು ನಾಂದೇಡದಲ್ಲಿ ಸ್ವಾಮಿ ರಾಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅವರು ದೇಶದ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಕೊಡುಗೆಯನ್ನು ಗೌರವಿಸಿದೆ ಎಂದು ಹೇಳಿದ ಅವರು ಸರಕಾರದ ವತಿಯಿಂದ ಅವರ ಜಯಂತಿಯನ್ನು ಆಚರಿಸಿ ಅವರ ಸೇವೆಯನ್ನು ಸ್ಮರಿಸುವ ಕಾರ್ಯ ಸರಕಾರ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಲ್ಲೆಯ ಸಂಘ -ಸಂಸ್ಥೆಗಳ ಮುಖಂಡರಾದ ಮಲ್ಲನಗೌಡ ಪಾಟೀಲ (ಬರಟಗಿ ),ಪ್ರದೀಪ ದೇಶಪಾಂಡೆ, ಕಲ್ಲಪ್ಪ ಶಿವಶರಣ, ಅಂಬಣ್ಣ ಗುನ್ನಾಪುರ, ರಾಜು ತಡಲಗಿ, ಸಂತೋಷ ಕಲಗುಡಿ, ರಾಜು ಕುಮಟಗಿ,ಅಶೋಕ ಚೋಳಕೆ,ಅಯೂಬಖಾನ ನದಾಫ್,ಮೊಹ್ಮದ್ ಬಾಗವಾನ, ಎಂ ಎಂ ಹಂಗರಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!