ವಿಜಯಪುರದ ಸಿದ್ದಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ಸಿಬ್ಬಂದಿ ನೇಮಕಾತಿಯ ಭದ್ರತಾ ಠೇವಣಿ ಹಣ ದುರುಪಯೋಗವಾಗಿದೆ ಎಂಬ ಆರೋಪದ ಮೇಲೆ ಬ್ಯಾಂಕ್ನ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಅಣ್ಣಿಗೇರಿ ವಿರುದ್ಧ ದೂರು ದಾಖಲಾಗಿದೆ. ₹1 ಕೋಟಿ 41 ಲಕ್ಷ 50 ಸಾವಿರ ದುರುಪಯೋಗದ ಆರೋಪ ವನ್ನು ರಾಘವೇಂದ್ರ ಅಣ್ಣಿಗೇರಿ ನಿರಾಕರಿಸಿದ್ದಾರೆ. ಬದಲಿಗೆ, ಹಣವನ್ನು ಬ್ಯಾಂಕ್ನ ಆಡಳಿತ ಮಂಡಳಿಯ ಸೂಚನೆಯಂತೆ ನೀಡಿರುವುದಾಗಿ ಹೇಳಿ, ತಮ್ಮ ಬಳಿ ದಾಖಲೆಗಳಿವೆ ಎಂದು ಸವಾಲು ಹಾಕಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಸಿದ್ದಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಇದೀಗ ಹಣ ದುರುಪಯೋಗದ ಆರೋಪದಿಂದ ಸುದ್ದಿಯಲ್ಲಿದೆ.
ಒಂದು ಕಾಲದಲ್ಲಿ ಶಾಸಕ ಯತ್ನಾಳ್ ಅವರ ಆಪ್ತರಾಗಿದ್ದ ರಾಘವೇಂದ್ರ ಅಣ್ಣಿಗೇರಿ, ಬ್ಯಾಂಕ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಇದೀಗ ಇದೇ ರಾಘವೇಂದ್ರ ಅಣ್ಣಿಗೇರಿ ವಿರುದ್ಧ ₹1 ಕೋಟಿ 41 ಲಕ್ಷ 50 ಸಾವಿರ ಭದ್ರತಾ ಠೇವಣಿ ಹಣ ದುರುಪಯೋಗದ ಆರೋಪದಲ್ಲಿ ಪೊಲೀಸ್ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ರಾಘವೇಂದ್ರ ಅಣ್ಣಿಗೇರಿ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಗ್ರಾಸವಾಗಿವೆ. 2019ರಿಂದ 2025ರ ಅವಧಿಯಲ್ಲಿ ಬ್ಯಾಂಕ್ನಲ್ಲಿ ನಡೆದ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ 28 ಅಭ್ಯರ್ಥಿಗಳಿಂದ ಭದ್ರತಾ ಠೇವಣಿ ಹಣ ಪಡೆಯಲಾಗಿತ್ತು. ಈ ಹಣವನ್ನು ಬ್ಯಾಂಕ್ಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿ ಕೊಂಡಿದ್ದಾರೆ ಎಂಬುದು ರಾಘವೇಂದ್ರ ಅಣ್ಣಿಗೇರಿ ವಿರುದ್ಧದ ಪ್ರಮುಖ ಆರೋಪ. ಬ್ಯಾಂಕ್ನ ಸಿಇಒ ಜ್ಯೋತಿಬಾ ಖಂಡಾಗಳೆ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 23ರಂದು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭದ್ರತಾ ಠೇವಣಿ ಹಣದಿಂದ ಬ್ಯಾಂಕ್ಗೆ ಬರಬೇಕಿದ್ದ ಬಡ್ಡಿ ಆದಾಯದಲ್ಲೂ ₹90 ಲಕ್ಷ 17 ಸಾವಿರದಷ್ಟು ನಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನೂ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ರಾಘವೇಂದ್ರ ಅಣ್ಣಿಗೇರಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. “ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ. ಅವರು ಹೇಳಿದಂತೆ ಮಾಡಿದ್ದೇನೆ. 28 ಜನರಿಂದ ಪಡೆದ ಭದ್ರತಾ ಠೇವಣಿ ಹಣವನ್ನು ಎಂಡಿ ಜ್ಯೋತಿಬಾ ಖಂಡಾಗಳೆ ಅವರಿಗೆ ನೀಡಿದ್ದೇನೆ. ಇದಕ್ಕೆ ನನ್ನ ಬಳಿ ದಾಖಲೆಗಳಿವೆ” ಎಂದು ಹೇಳಿದ್ದಾರೆ. “ಹಣವನ್ನು ಸೊಸೈಟಿಗೆ ಕೊಟ್ಟಿದ್ದೇನೆ. ಈಗ ಹಣ ಮುಟ್ಟಿದ ಮೇಲೆ ನನ್ನ ವಿರುದ್ಧವೇ ದೂರು ನೀಡುತ್ತಿರುವುದೇಕೆ?” ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ನಿಲ್ಲದ ರಾಘವೇಂದ್ರ ಅಣ್ಣಿಗೇರಿ, ಸಿಬ್ಬಂದಿ ನೇಮಕಾತಿಯನ್ನು ತಾವೊಬ್ಬರೇ ಮಾಡಲು ಸಾಧ್ಯವಿಲ್ಲ. ಆಡಳಿತ ಮಂಡಳಿ ಮತ್ತು ಸಹಕಾರಿ ಇಲಾಖೆಯ ಅಧಿಕಾರಿಗಳೂ ಪ್ರಕ್ರಿಯೆಯಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ. “ಹಣ ತೆಗೆದುಕೊಂಡು ನೌಕರಿ ಕೊಡಬಹುದಾ? ಈ ಬಗ್ಗೆ ತನಿಖೆಯಾಗಬೇಕು. ಸಿದ್ದಸಿರಿ ಈಗ ಮಲ್ಟಿಸ್ಟೇಟ್ ಕೋ- ಆಪರೇಟಿವ್ ಆಗಿದೆ. ಎಷ್ಟು ಜನರಿಂದ ಹಣ ಪಡೆದು ನೌಕರಿ ನೀಡಲಾಗಿದೆ ಎಂಬುದೂ ತನಿಖೆಯಾಗಲಿ” ಎಂದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತನಿಖೆಗೆ ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ವಿರುದ್ಧದ ದೂರು ಅಪಪ್ರಚಾರ ಮತ್ತು ತೇಜೋವಧೆ ಮಾಡುವ ಉದ್ದೇಶದಿಂದ ದಾಖಲಾಗಿದೆ ಎಂದು ರಾಘವೇಂದ್ರ ಅಣ್ಣಿಗೇರಿ ಆರೋಪಿಸಿದ್ದಾರೆ. 2025ರಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅಧ್ಯಕ್ಷರಾಗಿದ್ದಾಗಲೇ ಅವರ ಮನೆಗೆ ತೆರಳಿ ರಾಜೀನಾಮೆ ನೀಡಿದ್ದಾಗಿ ಹೇಳಿರುವ ಅಣ್ಣಿಗೇರಿ, ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪ ಡಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಇನ್ನೂ “ಸೆಪ್ಟೆಂಬರ್ 27ರಂದು ನಡೆಯುವ ಸಿದ್ದಸಿರಿ ಸಾಮಾನ್ಯ ಸಭೆಗೆ ನನ್ನನ್ನು ಕರೆಯಿರಿ. ದಾಖಲೆ ಸಮೇತ ಎಲ್ಲವನ್ನೂ ಸಾಬೀತುಪಡಿಸುತ್ತೇನೆ. ಯಾರದು ಸರಿ, ಯಾರದು ತಪ್ಪು ಎನ್ನುವುದು ತೀರ್ಮಾನವಾಗಲಿ” ಎಂದು ಯತ್ನಾಳ್ಗೆ ಸವಾಲು ಹಾಕಿದ್ದಾರೆ.
ಒಟ್ನಲ್ಲಿ ಒಂದೆಡೆ ₹1.41 ಕೋಟಿ ದುರುಪಯೋಗದ ಆರೋಪದಡಿ ಮಾಜಿ ಜಂಟಿ ಎಂಡಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಆರೋಪಗಳನ್ನು ತಳ್ಳಿಹಾಕಿರುವ ರಾಘವೇಂದ್ರ ಅಣ್ಣಿಗೇರಿ ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳ ನಡುವೆಯೇ ಸೆಪ್ಟೆಂಬರ್ 27ರ ಸಿದ್ದಸಿರಿ ಸಾಮಾನ್ಯ ಸಭೆಯತ್ತ ಇದೀಗ ಕುತೂಹಲ ಮೂಡಿದೆ. ದಾಖಲೆಗಳು ಏನು ಹೇಳುತ್ತವೆ, ತನಿಖೆಯಲ್ಲಿ ಸತ್ಯಾಂಶ ಏನು ಹೊರಬರುತ್ತದೆ ಎಂಬುದು ಮುಂದಿನ ಬೆಳವಣಿಗೆಯಲ್ಲಿ ಸ್ಪಷ್ಟವಾಗಬೇಕಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
