Belagavi

ಬೆಳಗಾವಿ: ಅನಾಥ ಶವಕ್ಕೆ ಸದಾಶಿವ ನಗರ ಶ್ಮಶಾನದಲ್ಲಿ ಸಕಲ ಗೌರವದೊಂದಿಗೆ ಅಂತಿಮ ಸಂಸ್ಕಾರ

Share

ಬೆಳಗಾವಿಯ ಮೋರ್ಚರಿಯಲ್ಲಿ ಹತ್ತು ದಿನಗಳಿಂದ ಯಾರೂ ವಾರಸುದಾರರಿಲ್ಲದೆ ಬಿದ್ದಿದ್ದ ಅನಾಥ ಶವಕ್ಕೆ ಸ್ಥಳೀಯರು ಹಾಗೂ ಮಾಜಿ ಮೇಯರ್ ವಿಜಯ್ ಮೋರೆ ಅವರ ಸಮಾಜಮುಖಿ ಪ್ರಯತ್ನದಿಂದ ಸಕಲ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ರಕ್ತಸಂಬಂಧಿಗಳಿಲ್ಲದಿದ್ದರೂ ಮಾನವೀಯತೆ ಮೆರೆದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಬೆಳಗಾವಿಯ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರಸುದಾರರು ಸಿಗದ ಕಾರಣ ಅಂದಾಜು ಹನ್ನೆರಡು ದಿನಗಳಿಂದ ಶವಾಗಾರದಲ್ಲಿದ್ದ ಮೃತದೇಹವೊಂದಕ್ಕೆ ನಗರದ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರ ಬಂಧುಗಳ ಪತ್ತೆಗಾಗಿ ಪೊಲೀಸರು ಹಳೇ ದಾಖಲೆ ಹಾಗೂ ವಿಳಾಸಗಳನ್ನು ತೀವ್ರವಾಗಿ ಶೋಧಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ, ಮಾರುಕಟ್ಟೆ ಠಾಣೆಯ ರಾಜಶ್ರೀ ಭೋಸಲೆ, ಡಿ.ಬಿ. ಪಾಟೀಲ್, ನಿಷಾರ್ ಸಮಶರ್ ಹಾಗೂ ಶವಾಗಾರದ ದೀಪಕ್ ಅವರು ಮಾಜಿ ಮೇಯರ್ ವಿಜಯ್ ಮೋರೆ ಅವರನ್ನು ಸಂಪರ್ಕಿಸಿ ನೆರವು ಕೋರಿದರು. ತಕ್ಷಣ ಸ್ಪಂದಿಸಿದ ವಿಜಯ್ ಮೋರೆ ಅವರು ಪೊಲೀಸ್ ಇಲಾಖೆಯ ಕಾನೂನು ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಅಂತಿಮ ವಿಧಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಯಾವುದೇ ರಕ್ತಸಂಬಂಧಿಗಳು ಇರದಿದ್ದರೂ ಸದಾಶಿವ ನಗರದ ಸ್ಮಶಾನ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು, ಮೃತರ ಅಂತಿಮ ಯಾತ್ರೆಗೆ ಸಾಕ್ಷಿಯಾಗಿ ಶಾಸ್ತ್ರೋಕ್ತವಾಗಿ ಅಂತಿಮ ವಿದಾಯ ಹೇಳುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದರು.

Tags:

error: Content is protected !!