ರಾಯಬಾಗ ತಾಲ್ಲೂಕಿನ ಹಳೇ ದಿಗ್ಗೇವಾಡಿ ಗ್ರಾಮದ ಕೃಷ್ಣಾ ನದಿ ತೀರದ ಕಬ್ಬಿಣದ ಗದ್ದೆಯಲ್ಲಿರುವ ಶ್ರೀ ಗಂಗಾಧರ ರಾಮು ನಾಗರಾಳೆ ಅವರ ಹೊಲದಲ್ಲಿ ಬೃಹದಾಕಾರದ ಮೊಸಳೆಯೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು. ಹಲವು ದಿನಗಳಿಂದ ಕೃಷಿ ಭೂಮಿ ಹಾಗೂ ನದಿ ತೀರದಲ್ಲಿ ಸಂಚರಿಸುತ್ತಿದ್ದ ಈ ಮೊಸಳೆಯಿಂದಾಗಿ ಗ್ರಾಮಸ್ಥರು ಭಯದಲ್ಲೇ ದಿನ ದೂಡುವಂತಾಗಿತ್ತು.

ಸ್ಥಳೀಯರ ಆತಂಕಕ್ಕೆ ಸ್ಪಂದಿಸಿದ ರಾಯಬಾಗ ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ರಾಜು ಎಮ್ ಚೌಗುಲೆ ಅವರ ನೇತೃತ್ವದಲ್ಲಿ ಗ್ರಾಮದ ಸಾಹಸಿ ಯುವಕರು ಹಗ್ಗದ ಸಹಾಯದಿಂದ ಸಮಯಪ್ರಜ್ಞೆ ಮೆರೆದು, ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಸದರಿ ವಿಷಯವನ್ನು ದಿಗ್ಗೇವಾಡಿ ಗ್ರಾಮದ ಮುಖಂಡರು ರಾಯಬಾಗ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದು, ಅದನ್ನು ಸುರಕ್ಷಿತವಾಗಿ ಸೂಕ್ತ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಮೊಸಳೆ ಸೆರೆಯಾದ ಹಿನ್ನೆಲೆಯಲ್ಲಿ ಹಳೇ ದಿಗ್ಗೇವಾಡಿ ಗ್ರಾಮದ ಜನತೆ ನಿರಾಳರಾಗಿದ್ದು, ಮೊಸಳೆಯನ್ನು ಸೆರೆಹಿಡಿಯುವ ಅಪಾಯಕಾರಿ ಕಾರ್ಯದಲ್ಲಿ ಧೈರ್ಯದಿಂದ ಭಾಗವಹಿಸಿದ ಯುವಕರಾದ ಸಚಿನ್ ಖಂಡೇರಾಜುರೆ, ದೇವರಾಜ್ ಗಸ್ತೆ, ಬೊಲಾ ಕಡಾಳೆ, ಮಂಜುನಾಥ ಖಂಡೇರಾಜುರೆ, ವಿರೂಪಾಕ್ಷ ಖೋತ, ರವೀಂದ್ರ ಚೌಗುಲೆ ಹಾಗೂ ನಾಯಕ್ಕಪ್ಪಾ ನಾಗರಾಳೆ ಅವರಿಗೆ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
