ಸಹಕಾರ ಸಚಿವ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಶತಮಾನಕ್ಕೂ ಹೆಚ್ಚು ಕಾಲದಿಂದ ನಿರ್ಲಕ್ಷಕ್ಕೊಳಪಟ್ಟ ಜೋಡು ಕೆರೆ ಅಭಿವೃದ್ಧಿ ಕಾಮಗಾರಿಯ ಮೊದಲ ಹಂತ ಪೂರ್ಣಗೊಂಡ ಪರಿಣಾಮ ಸಣ್ಣ ಕೆರೆ ತುಂಬುವ ಯೋಜನೆಗೆ ಪುರಸಭೆಯ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮತ್ತು ಯುವ ಧುರೀಣ ಶಿವಕುಮಾರ ಸವದಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ ಸವದಿ ಮಾತನಾಡಿ, ಜೋಡು ಕೆರೆ ಅಭಿವೃದ್ಧಿಗೊಳಿಸಿ ಅಥಣಿಯನ್ನು ಸುಂದರಗೊಳಿಸುವುದು ಸಹಕಾರ ಸಚಿವ ಲಕ್ಷ್ಮಣ ಸವದಿಯವರ ಕನಸಾಗಿತ್ತು ಈ ಹಿನ್ನಲೆಯಲ್ಲಿ ಜೋಡು ಕೆರೆ ಅಭಿವೃದ್ಧಿ ಯೋಜನೆ ಸಿದ್ಧಗೊಂಡು ಅನುಷ್ಠಾನಗೊಳ್ಳುತ್ತಿದೆ ಎಂದ ಅವರು ಈ ಜೋಡು ಕೆರೆ ಅಭಿವೃದ್ಧಿಗೆ ಪುರಸಭೆಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಅಧಿಕಾರಿಗಳು ಜೊತೆಗೆ ಸುಂದರವಾಗಿ ವಿನ್ಯಾಸಗೊಳಿಸಿದ ಗುತ್ತಿಗೆದಾರರನ್ನು ಅಭಿನಂದಿಸಿದರು.
ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ ಮಾತನಾಡಿ, ಜೋಡು ಕೆರೆ ಅಥಣಿ ಜನರ ಆಸ್ತಿ ಈ ಆಸ್ತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು ಪೂಜೆ ಮಾಡಿದ ನಂತರ ಬಾಳಿ ಬಚ್ಚಿ, ಹೂ ಸೇರಿದಂತೆ ನೀರು ನೈರ್ಮಲ್ಯವಾಗುವ ವಸ್ತುಗಳನ್ನು ಹಾಕಬಾರದು ಮತ್ತು ಜಲ ಮೂಲವನ್ನು ಕಾಪಾಡಿಕೊಂಡು ಹೋಗಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸದಸ್ಯರಾದ ಮಲ್ಲಿಕಾರ್ಜುನ ಬುಟಾಳಿ, ಪ್ರಮೋದ ಬಿಳ್ಳೂರ, ರಾಜಶೇಖರ ಗುಡೋಡಗಿ, ರಿಯಾಜ ಸನದಿ, ಮೃಣಾಲಿನಿ ದೇಶಪಾಂಡೆ, ರಮೇಶ ಪವಾರ, ಉದಯ ಸೋಳಸಿ, ಬಾಬು ಖೆಮಲಾಪುರ, ಬಿ.ಎನ್.ಪಾಟೀಲ, ವಿಶ್ವನಾಥ ಗಡದೆ ಸೇರಿದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆದಾರ ಉಪಸ್ಥಿತರಿದ್ದರು.
