ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ, ಆದರೆ ಚಕ್ರದ ನಾಲ್ಕು ಚಕ್ರದ ವಾಹನದಲ್ಲಿ ಕುಳಿತ ವ್ಯಕ್ತಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಬಂದರೆ ಯಾರಿಗೆ ತಾನೇ ಕೋಪ ಬಾರದಿರಲು ಸಾಧ್ಯವೇ ನೀವೇ ಹೇಳಿ? ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಎಐ ಕ್ಯಾಮೆರಾದ ಈ ಎಡವಟ್ಟು ಈಗ ಇಡೀ ರಾಜ್ಯದ ಗಮನ ಸೆಳೆದಿದೆ.

ಅಥಣಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ನಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಯಾಮೆರಾದ ವಿಚಿತ್ರ ತಾಂತ್ರಿಕ ದೋಷವೊಂದು ಬೆಳಕಿಗೆ ಬಂದಿದ್ದು, ಕಾರು ಚಾಲನೆ ಮಾಡುತ್ತಿದ್ದ ಸುಭಾಷ್ ಬೋಜನೆ ಎಂಬುವವರಿಗೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ 500 ರೂಪಾಯಿ ದಂಡ ವಿಧಿಸಿರುವ ಅಘೋಷಿತ ಶಾಕ್ ಎದುರಾಗಿದೆ. ತಮ್ಮ ಕಾರಿನ ನಂಬರ್ ಪ್ಲೇಟ್ಗೆ ಸಂಚಾರ ಪೊಲೀಸರ ವ್ಯವಸ್ಥೆಯು ಹೆಲ್ಮೆಟ್ ರಹಿತ ಚಾಲನೆ ಎಂದು ನೋಟಿಸ್ ಕಳುಹಿಸುವುದನ್ನು ಕಂಡು ದಂಗಾಗಿ ಹೋದ ಮಾಲೀಕ, ಇನ್ನು ಮುಂದೆ ಕಾರಿನೊಳಗೆ ಕುಳಿತುಕೊಂಡು ಹೆಲ್ಮೆಟ್ ಧರಿಸಿ ಓಡಾಡಬೇಕಾದ ಸ್ಥಿತಿ ಬಂದಿದೆಯಾ ಎಂದು ವ್ಯಂಗ್ಯವಾಡಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುವ ಮೂಲಕ ಪೊಲೀಸ್ ಇಲಾಖೆಯ ತಾಂತ್ರಿಕ ವೈಫಲ್ಯವನ್ನು ಗಂಭೀರ ಚರ್ಚೆಗೆ ಗ್ರಾಸವಾಗಿಸಿದೆ.
