Chikkodi

ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣಾಭಿವೃದ್ಧಿ:ಕೇಂದ್ರ ಸಚಿವ ಮುರಳಿಧರ ಮೊಹೊಳ

Share

ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಿದ ನಂತರ ಈ ಕ್ಷೇತ್ರಕ್ಕೆ ಹೊಸ ವೇಗ ಹಾಗೂ ಉತ್ತೇಜನ ದೊರೆತಿದೆ ಎಂದು ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳಿಧರ ಮೊಹೊಳ ಅಭಿಪ್ರಾಯಪಟ್ಟರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ‘ಶ್ರೀ ಬೀರೇಶ್ವರ ಕೋ-ಆಪ್ ಸೊಸೈಟಿ’ಯ ನೂತನ ಆಡಳಿತಾತ್ಮಕ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಬೀರೇಶ್ವರ ಸಂಸ್ಥೆಯು ಗ್ರಾಮೀಣ ಭಾಗದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಬೀರೇಶ್ವರ ಸಂಸ್ಥೆಯು ಸಾಮಾನ್ಯ ಜನರ ಹಾಗೂ ಗ್ರಾಮೀಣ ಭಾಗದ ಆರ್ಥಿಕ ಪ್ರಗತಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ಬೀರೇಶ್ವರ ಸಂಸ್ಥೆಯು ರೈತರಿಗೆ ಮತ್ತು ಬಡ ವರ್ಗದ ಜನರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ನೀಡುವ ಮೂಲಕ ಅವರ ನೆರವಿಗೆ ನಿಂತಿದೆ ಎಂದು ಬಣ್ಣಿಸಿದರು.

ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಿ, ಅಣ್ಣಾಸಾಹೇಬ ಜೊಲ್ಲೆ ಅವರು ಸಹಕಾರ ರಂಗದಲ್ಲಿ ಅಪಾರ ಜ್ಞಾನ ಮತ್ತು ಸುದೀರ್ಘ ಅನುಭವ ಹೊಂದಿದ ನಾಯಕರಾಗಿದ್ದಾರೆ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಬೀರೇಶ್ವರ ಸಂಸ್ಥೆಯು ಇಂದು ಹಂತ ಹಂತವಾಗಿ ಬೆಳೆದು ಹೆಮ್ಮರವಾಗಿದ್ದು, ಲಕ್ಷಾಂತರ ಜನರಿಗೆ ಆಸರೆಯಾಗಿದೆ ಎಂದು ಸಂಸ್ಥೆಯ ಬೆಳವಣಿಗೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಡಸೋಸಿಯ ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಸಮರಜಿತ್ ಘಾಟಗೆ, ಶಾಸಕ ದುರ್ಯೋಧನ ಐಹೊಳೆ, ಪಿ. ರಾಜೀವ್, ಶ್ರೀಮಂತ ಪಾಟೀಲ, ಅರವಿಂದ ದೇಶಪಾಂಡೆ, ಸಂಜಯ ಪಾಟೀಲ, ಅನಿಲ್ ಬೆನಕೆ, ಚಂದಗಡ ಶಾಸಕ ಶಿವಾಜಿ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಜಯಕುಮಾರ ಖೋತ್, ರಾಜೇಂದ್ರ ಪಾಟೀಲ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ವಂದನಾರ್ಪಣೆ ಮಾಡಿದರು.

Tags:

error: Content is protected !!