ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣವೇ ಜಿಲ್ಲೆಯನ್ನು ‘ಬರಪೀಡಿತ’ ಎಂದು ಘೋಷಿಸಬೇಕೆಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದ್ದಾರೆ.

ಚಿಕ್ಕೋಡಿಯ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಸ್ತುತ ಕೃಷಿ ಮತ್ತು ಬರ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದರು.ಬೆಳಗಾವಿ ಜಿಲ್ಲೆಯಲ್ಲಿ ಶೇ. 98ರಷ್ಟು ಬಿತ್ತನೆಯಾಗಿದ್ದರೂ, ವಾಡಿಕೆಗಿಂತ ಶೇ. 29ರಷ್ಟು ಮಳೆ ಅಭಾವ ಉಂಟಾಗಿದೆ. ಇದರಿಂದಾಗಿ ಹೆಸರು, ಉದ್ದು, ಸೋಯಾಬೀನ್, ಹತ್ತಿ ಹಾಗೂ ಸಜ್ಜೆ ಬೆಳೆಗಳು ಕಮರಿಹೋಗಿದ್ದು, ಇಳುವರಿಯಲ್ಲಿ ಶೇ. 50ರಷ್ಟು ಕುಸಿತವಾಗುವ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ತೋಟಗಾರಿಕೆ ಬೆಳೆಗಳು ಮಳೆಯಿಲ್ಲದೆ ಸಂಪೂರ್ಣ ಹಾನಿಗೊಳಗಾಗಿವೆ.ಮಳೆ ಕೊರತೆಯಿಂದಾಗಿ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿಗೆ ದೊಣ್ಣೆ ಹುಳು ಬಾಧೆ ಆವರಿಸಿದೆ. ಕೃಷಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಬ್ಬು ಬೆಳೆಗಾರರ ನೆರವಿಗೆ ಬರಬೇಕು.
ರಾಜ್ಯ ಸರ್ಕಾರ ತಕ್ಷಣ ನಿದ್ರಾವಸ್ಥೆಯಿಂದ ಎಚ್ಚೆತ್ತು ರೈತರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ವಿತರಿಸಬೇಕು, ಕುಡಿಯುವ ನೀರಿನ ಅಭಾವ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು.
ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಮೃತ ಕುಲಕರ್ಣಿ, ಸಂಜಯ ಪಾಟೀಲ, ಶಾಂಭವಿ ಅಶ್ವತಪುರ, ಪವನ ಮಹಾಜನ, ರಾವಸಾಹೇಬ ಕಮತೆ, ಬಾಬಾಸಾಹೇಬ ಕೆಂಚನ್ನವರ, ರಾಜಶೇಖರ ಖಣದಾಳೆ, ರಾಜು ಹರಗನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
