ದಕ್ಷಿಣ ಭಾರತದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬಿರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಮುಖ್ಯ ಆಡಳಿತ ಕಚೇರಿ ಸೆ.19ರಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ) ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳೀಧರರಾವ್ ಮೋಹೋಳ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಿ.ನಾರಾಯಣಸ್ವಾಮಿ ಹಾಗೂ ಜಗದೀಶ ಶೆಟ್ಟರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ನೂತನ ಮುಖ್ಯ ಕಚೇರಿ ಉದ್ಘಾಟನೆಗೆ ಯೋಜಿಸಲಾಗಿತ್ತು.
ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಸೆ.19ರಂದು ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ವತಿಯಿಂದ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಥೆಯು ಪ್ರಸ್ತುತ 4.60 ಲಕ್ಷ ಸದಸ್ಯರನ್ನು ಹೊಂದಿದ್ದು, ₹5,667 ಕೋಟಿ ಠೇವಣಿ ಹಾಗೂ ₹4,038 ಕೋಟಿ ಸಾಲ ನೀಡಿದೆ. ₹51.04 ಕೋಟಿ ನಿವ್ವಳ ಲಾಭ ಗಳಿಸಿದ್ದು, ₹9,700 ಕೋಟಿ ಒಟ್ಟು ವ್ಯವಹಾರ ನಡೆಸುವ ಮೂಲಕ ದಕ್ಷಿಣ ಭಾರತದಲ್ಲಿ ದಾಖಲೆ ನಿರ್ಮಿಸಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಆಧುನಿಕ ಸಹಕಾರಿ ವ್ಯವಸ್ಥೆಯ ಕೇಂದ್ರ:
ಯಕ್ಸಂಬಾ ಪಟ್ಟಣದಲ್ಲಿ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿರುವ ನೂತನ ಮುಖ್ಯ ಕಚೇರಿಯನ್ನು ಆಧುನಿಕ ಸಹಕಾರಿ ವ್ಯವಸ್ಥೆಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಆಡಳಿತ ಕಚೇರಿ, ಸಮುದಾಯ ಭವನ, ಮನರಂಜನಾ ಸೌಲಭ್ಯಗಳು, ಸಿಬ್ಬಂದಿ ವಸತಿ, ಸೌರ ವಿದ್ಯುತ್ ವ್ಯವಸ್ಥೆ, ಉದ್ಯಾನ ಹಾಗೂ ವಿಶಾಲ ವಾಹನ ನಿಲುಗಡೆ ಸ್ಥಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ನೂತನ ಮುಖ್ಯ ಆಡಳಿತ ಕಟ್ಟಡವು ಸುಮಾರು 80,800 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಸುಮಾರು 250 ಸಿಬ್ಬಂದಿ ಕಾರ್ಯನಿರ್ವಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಆಧುನಿಕ ಕಚೇರಿ ಸೌಲಭ್ಯಗಳೊಂದಿಗೆ ಸಂಸ್ಥೆಯ ವಿವಿಧ ಆಡಳಿತಾತ್ಮಕ ಚಟುವಟಿಕೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ.
1,500 ಜನರ ಸಾಮರ್ಥ್ಯದ ಬಿರೇಶ್ವರ ಭವನ:
ಮುಖ್ಯ ಕಚೇರಿ ಆವರಣದಲ್ಲಿ ‘ಶ್ರೀ ಬಿರೇಶ್ವರ ಭವನ’ ನಿರ್ಮಿಸಲಾಗಿದ್ದು, ಹವಾನಿಯಂತ್ರಿತ ಸಮುದಾಯ ಭವನವು ಸುಮಾರು 1,500 ಜನರ ಆಸನ ಸಾಮರ್ಥ್ಯ ಹೊಂದಿದೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಸ್ಥೆಯ ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲು ಅವಕಾಶವಿದೆ.
ಸಿಬ್ಬಂದಿಗೆ 69 ವಸತಿ ಘಟಕ:
ಸಿಬ್ಬಂದಿ ಹಾಗೂ ಅವರ ಕುಟುಂಬಗಳ ವಸತಿಗಾಗಿ ಆವರಣದಲ್ಲಿ ಮೂರು ವಸತಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪ್ರತಿ ಕಟ್ಟಡದಲ್ಲಿ 20 ಎರಡು ಬಿಎಚ್‌ಕೆ ಹಾಗೂ ಮೂರು ಒಂದು ಬಿಎಚ್‌ಕೆ ವಸತಿ ಘಟಕಗಳಿದ್ದು, ಒಟ್ಟು 69 ವಸತಿ ಘಟಕಗಳನ್ನು ನಿರ್ಮಿಸಲಾಗಿದೆ. ಇವುಗಳ ಒಟ್ಟು ನಿರ್ಮಾಣ ವಿಸ್ತೀರ್ಣ ಸುಮಾರು 72,056 ಚದರ ಅಡಿಯಾಗಿದೆ.
ಪ್ರತಿ ವಸತಿ ಕಟ್ಟಡದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಸಭಾಂಗಣ ಹಾಗೂ ಲಿಫ್ಟ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸಿಬ್ಬಂದಿಗೆ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಒಂದೇ ಆವರಣದಲ್ಲಿ ದೊರೆಯಲಿವೆ.
ಸಹಕಾರಿ ಕ್ಷೇತ್ರದಲ್ಲಿ ಸಂಸ್ಥೆಯ ಬೆಳವಣಿಗೆಯ ಪಯಣದಲ್ಲಿ ನೂತನ ಮುಖ್ಯ ಕಚೇರಿ ಪ್ರಮುಖ ಮೈಲಿಗಲ್ಲಾಗಿದೆ. ಸೆ.19ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸಹಕಾರಿ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಣ್ಣಾಸಾಹೇಬ ಜೊಲ್ಲೆ ಮನವಿ ಮಾಡಿದ್ದಾರೆ.
