Chikkodi

ಕತ್ತಲಲ್ಲಿ ರೈತರ ಬದುಕು; ನಿರಂತರ ವಿದ್ಯುತ್‌ಗೆ ಆಗ್ರಹಿಸಿ ಕರೋಶಿಯಲ್ಲಿ 5 ಗಂಟೆ ಧರಣಿ

Share

ತಾಲೂಕಿನ ಕರೋಶಿ ಗ್ರಾಮದ ತೋಟದ ಮನೆಗಳಿಗೆ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗದಿರುವುದನ್ನು ಖಂಡಿಸಿ, ನೂರಾರು ರೈತರು ಆಕ್ರೋಶಗೊಂಡು ಸ್ಥಳೀಯ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಸುಮಾರು ಐದು ಗಂಟೆಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿದರು.

ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜಾಗುತ್ತಿದ್ದರೂ, ತೋಟದ ಮನೆಗಳಲ್ಲಿ ವಾಸಿಸುವ ರೈತ ಕುಟುಂಬಗಳಿಗೆ ರಾತ್ರಿ ವೇಳೆ ಕರೆಂಟ್ ನೀಡಲಾಗುತ್ತಿಲ್ಲ. ಹಿಂದೆ ರಾತ್ರಿ 4 ಗಂಟೆ ಹಾಗೂ ಹಗಲಿನಲ್ಲಿ 3 ಗಂಟೆಗಳ ಕಾಲ ಥ್ರೀ-ಫೇಸ್ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ ಇತ್ತೀಚೆಗೆ ರಾತ್ರಿ ಪೂರ್ತಿ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದರಿಂದ ರೈತರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ವಿದ್ಯುತ್ ಅಭಾವದಿಂದಾಗಿ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿದ್ದು, ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆಯಾಗಿದೆ. ಇದೇ ವೇಳೆ ತೋಟದ ಮನೆಗಳಲ್ಲಿ ಜಾನುವಾರು ಹಾಗೂ ವಿದ್ಯುತ್ ಉಪಕರಣಗಳ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.

ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ಹಾಗೂ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಚಿಕ್ಕೋಡಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಇರುವಾಗ ನಮ್ಮ ತೋಟದ ಮನೆಗಳಿಗೆ ಮಾತ್ರ ಏಕೀ ತಾರತಮ್ಯ?” ಎಂದು ಆಕ್ರೋಶಗೊಂಡ ರೈತರು ಪ್ರಶ್ನಿಸಿದರು.

ಸುದೀರ್ಘ ಹೋರಾಟದ ನಂತರ ಸ್ಥಳಕ್ಕೆ ಭೇಟಿ ನೀಡಿದ ವಿದ್ಯುತ್ ಸರಬರಾಜು ಮಂಡಳಿಯ ಸೆಕ್ಷನ್ ಆಫೀಸರ್ ಆರ್. ಬಿ. ಕುಂಬಾರ ಹಾಗೂ ಜೂನಿಯರ್ ಎಂಜಿನಿಯರ್ ಕುಮಾರ್, ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ತೋಟದ ಮನೆಗಳಿಗೆ ಶೀಘ್ರವೇ ವಿದ್ಯುತ್ ಪೂರೈಕೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಮುನ್ನೆಚ್ಚರಿಕೆ ಕ್ರಮವಾಗಿ ಎಎಸ್‌ಐ ಮುರ್ನಾಳ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಸೇವಕರಿ, ಸುನಿಲ್ ಹರಿಶ್ಚಂದ್ರ ಶೇಂಡುರೆ, ಅಣ್ಣಪ್ಪ ನಿರ್ವಾಣಿ, ಜೀವನ್ ಪವಾರ, ಸುನಿಲ ತುಕಾರಾಂ ಶೇಂಡುರೆ, ಶಿವಾನಂದ ಕೇಸ್ತಿ, ಮಹೇಶ್ ಚೌಡನವರ್, ವಿಜಯ ಕೋರೆ, ಏಕನಾಥ ಬಿದ್ರೆ,ಜ್ಯೋತಿಬಾ ಸುಳುಕುಡೆ, ಕಿರಣ್ ಶಿಂಗಾಯಿ ಸೇರಿದಂತೆ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Tags:

error: Content is protected !!