ಬೆಳಗಾವಿಯ ಬಿಮ್ಸ್ ಆಡಿಟೋರಿಯಂನಲ್ಲಿ ನಡೆದ ವಿಕಲಚೇತನರ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯ ವಿಚಾರವಾಗಿ ಕುತೂಹಲಕಾರಿ ಘಟನೆ ನಡೆದಿದೆ. ಕೇವಲ ಎರಡು ಚರಣಗಳಿಗೆ ಗೀತೆಯನ್ನು ನಿಲ್ಲಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅಸಮಾಧಾನಗೊಂಡು, ಪೂರ್ಣ ಹಾಡು ಹಾಕುವಂತೆ ಖುದ್ದು ಸೂಚನೆ ನೀಡಿದ್ದಾರೆ.

ಗುರುವಾರ ಬೆಳಗಾವಿಯ ಬಿಮ್ಸ್ ಆಡಿಟೋರಿಯಂನಲ್ಲಿ ವಿಕಲಚೇತನ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಈ ಘಟನೆ ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಅನ್ನು ಕೇವಲ ಎರಡು ಚರಣಗಳಿಗೆ ಸ್ಥಗಿತಗೊಳಿಸಲಾಯಿತು. ಇದನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು, ಗೀತೆಯನ್ನು ಅರ್ಧಕ್ಕೆ ನಿಲ್ಲಿಸದೆ ಎಲ್ಲಾ ಆರು ಚರಣಗಳನ್ನು ಪೂರ್ಣವಾಗಿ ಹಾಡಿಸಬೇಕು ಎಂದು ಸ್ಥಳದಲ್ಲಿದ್ದ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶೆಟ್ಟರ್ ಅವರ ಆದೇಶದ ಮೇರೆಗೆ ಗೊಂದಲಕ್ಕೊಳಗಾದ ಬಿಮ್ಸ್ ಸಿಬ್ಬಂದಿ ಕೂಡಲೇ ಮೊಬೈಲ್ ಮೂಲಕ ಪೂರ್ಣ ಗೀತೆಯನ್ನು ಹುಡುಕಿ ಧ್ವನಿವರ್ಧಕದಲ್ಲಿ ಪ್ರಸಾರ ಮಾಡಿದರು. ಇತ್ತೀಚಿನ ದಿನಗಳಲ್ಲಿ ‘ವಂದೇ ಮಾತರಂ’ ಗೀತೆಯ ಚರಣಗಳ ಕುರಿತು ಹಲವೆಡೆ ವಿವಾದಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಜಗದೀಶ್ ಶೆಟ್ಟರ್ ಅವರ ಈ ದಿಢೀರ್ ನಿರ್ಧಾರ ಹಾಗೂ ರಾಷ್ಟ್ರೀಯ ಗೀತೆಯ ಮೇಲಿನ ಗೌರವದ ಪ್ರದರ್ಶನವು ಸಭೆಯಲ್ಲಿ ಉಪಸ್ಥಿತರಿದ್ದ ಉಪಮೇಯರ್ ಹಣಮಂತ ಕೊಂಗಾಲಿ, ಮಾಜಿ ಶಾಸಕ ಸಂಜಯ ಪಾಟೀಲ್ ಸೇರಿದಂತೆ ಗಣ್ಯರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
