Chikkodi

ವಿದ್ಯುತ್‌ ಕ್ಷಾಮಕ್ಕೆ ಬೆಸತ್ತ ಗ್ರಾಮಸ್ಥರು; KEB ಕಚೇರಿ ಮುಂದೆಯೇ ಮಹಾಪ್ರಸಾದ ಸೇವಿಸಿ ಬೆಳಗಲಿ, ಉಮರಾಣಿ ಜನರ ವಿನೂತನ ಪ್ರತಿಭಟನೆ!

Share

ತಾಲೂಕಿನ ಉಮರಾಣಿ ಹಾಗೂ ಬೆಳಗಲಿ ಗ್ರಾಮದ ತೋಟದ ಪಟ್ಟಿಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಾಗರಮುನ್ನೊಳ್ಳಿಯ KEB (ಹೆಸ್ಕಾಂ) ಕಚೇರಿ ಎದುರು ಅನ್ನಪ್ರಸಾದ ಸೇವಿಸುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಹಾಗೂ ಆಕ್ರೋಶಭರಿತ ಪ್ರತಿಭಟನೆ ನಡೆಸಿದ್ದಾರೆ.

ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ತೋಟದ ಪಟ್ಟಿ ಪ್ರದೇಶದ ಜನರು ಗಣೇಶನಿಗೆ ಮಹಾಪ್ರಸಾದ ತಯಾರಿಸಿದ್ದರು. ಆದರೆ, ಕತ್ತಲಿನಲ್ಲಿ ಕರೆಂಟ್ ಇಲ್ಲದೆ ಮಹಾಪ್ರಸಾದ ಸೇವಿಸುವುದು ಹೇಗೆ ಎಂದು ಕಂಗಾಲಾದ ಭಕ್ತಾದಿಗಳು ಹಾಗೂ ಗ್ರಾಮಸ್ಥರು, ತಯಾರಿಸಿದ ಅನ್ನಪ್ರಸಾದವನ್ನು ನೇರವಾಗಿ ನಾಗರಮುನ್ನೊಳ್ಳಿ KEB ಕಚೇರಿ ಆವರಣಕ್ಕೇ ತೆಗೆದುಕೊಂಡು ಬಂದು, ಕಚೇರಿಯ ಎದುರೇ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಸಿದ್ಧ ವಕೀಲ ಪ್ರಶಾಂತ್ ಹುಕ್ಕೇರಿ, “ಗ್ರಾಮೀಣ ಹಾಗೂ ತೋಟದ ಪಟ್ಟಿ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ನೀಡುವಲ್ಲಿ ಸರ್ಕಾರ ಮತ್ತು ಹೆಸ್ಕಾಂ ಸಂಪೂರ್ಣ ವಿಫಲವಾಗಿವೆ. ಹಬ್ಬ-ಹರಿದಿನಗಳಲ್ಲೂ ಗ್ರಾಮೀಣ ಭಾಗದ ಜನರನ್ನು ಕತ್ತಲಲ್ಲಿಡುವ ವಾತಾವರಣ ನಿರ್ಮಾಣವಾಗಿದೆ. ದಿನನಿತ್ಯದ ಬದುಕಿಗೂ ವಿದ್ಯುತ್ ಇಲ್ಲದೆ ಜನರು ಕಷ್ಟಪಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುತ್ತೇವೆ” ಎಂದು ಸರ್ಕಾರದ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.

 

Tags:

error: Content is protected !!