ಶಮನೇವಾಡಿ ಎಸ್.ಡಿ.ಎಮ್. ಜೈನಮಠ ಟ್ರಸ್ಟ್ನ ಎ.ಜಿ.ಎಮ್. ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ಬ್ಯಾಚಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ (ಆರಂಭ-2ಕೆ26) ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯಲ್ಲಟ್ಟಿಯ ಕೊಣ್ಣುರ ಶಿಕ್ಷಣ ಸಮೂಹದ ಸಂಸ್ಥಾಪಕ ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣುರ ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬಹುಆಯಾಮದ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಹೆತ್ತವರಿಗೆ, ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಎಂದೂ ಮೋಸ ಮಾಡದೆ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು. ಯಶಸ್ಸಿಗೆ ಉನ್ನತ ಕನಸುಗಳು ಹಾಗೂ ಶಿಸ್ತುಬದ್ಧ ಜೀವನಶೈಲಿ ಮುಖ್ಯ” ಎಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ, ಐಐಟಿ ಧಾರವಾಡದ ಸಹ-ಪ್ರಾಧ್ಯಾಪಕ ಡಾ. ರಾಹುಲ ಪಾಂಡ್ಯಾ ಮಾತನಾಡಿ, “ವಿದ್ಯಾರ್ಥಿಗಳು ಕೇವಲ ನೌಕರಿಯ ಬೆನ್ನತ್ತದೆ, ಸ್ವಂತ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕು. ಇಂಜಿನಿಯರಿಂಗ್ ಅವಧಿಯಲ್ಲಿ ಶೇ. 70ರಷ್ಟು ಸಮಯವನ್ನು ವ್ಯಾಸಂಗಕ್ಕೆ ಹಾಗೂ ಉಳಿದ ಸಮಯವನ್ನು ಪಠ್ಯೇತರ ಚಟುವಟಿಕೆಗಳು ಮತ್ತು ಮನೋರಂಜನೆಗೆ ಮೀಸಲಿಟ್ಟು ಪ್ರಗತಿ ಸಾಧಿಸಬೇಕು” ಎಂದು ಸಲಹೆ ನೀಡಿದರು.
ಸಂಸ್ಥೆಯ ಸಂಚಾಲಕಿ ಭಾಗ್ಯಶ್ರೀ ಅಲಗೂರೆ ಪ್ರಾಸ್ತಾವಿಕವಾಗಿ ಮಾತನಾಡಿ, “ಪೂಜ್ಯ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ ದಿವ್ಯ ಹಾರೈಕೆಯೊಂದಿಗೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ತರಲು ಇಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮೆಡಿಕಲ್, ಆಯುರ್ವೇದಿಕ್ ಸೇರಿದಂತೆ ಹಲವು ಮಹಾವಿದ್ಯಾಲಯಗಳು ಆರಂಭಗೊಳ್ಳಲಿವೆ. ಅಲ್ಲದೆ, ವಿಟಿಯು ರ್ಯಾಂಕ್ విజೇತರಿಗೆ ವಿದೇಶಿ ಪ್ರವಾಸ ಹಾಗೂ ಟಾಪರ್ಗಳಿಗೆ ಲ್ಯಾಪ್ಟಾಪ್/ಟ್ಯಾಬ್ ನೀಡಲಾಗುವುದು” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸಂಜಯ ಅಂಕಲಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹಾಗೂ ವೃತ್ತಿಪರ ಕೌಶಲ ಬೆಳೆಸಲು ಪ್ರಥಮ ವರ್ಷದಿಂದಲೇ ಖ್ಯಾತ ಕಂಪನಿಗಳ ಎಚ್.ಆರ್. ಅಧಿಕಾರಿಗಳಿಂದ ಹಾಗೂ ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳ ತಜ್ಞರಿಂದ ವಿಶೇಷ ತರಬೇತಿ ನೀಡಲಾಗುವುದು” ಎಂದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿಜ್ಞಾನ ವಿಭಾಗದ ಅತ್ಯುತ್ತಮ ಫಲಿತಾಂಶಕ್ಕೆ ಕಾರಣಕರ್ತರಾದ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಗೌರವಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ವೈಷ್ಣವಿ ಮತ್ತು ತಂಡದವರು ಸ್ವಾಗತಗೀತೆ ಹಾಡಿದರು. ಡಾ. ಸಚಿನ್ ಮೆಕ್ಕಳಕಿ ಹಾಗೂ ಪ್ರಶಾಂತ ಶೆಡಬಾಳಕರ ಅತಿಥಿ ಪರಿಚಯ ಮಾಡಿದರು. ಉಲ್ಲಾಸ ಮಹಿಶಾಳೆ ವಂದಿಸಿದರು ಮತ್ತು ಅಶ್ವಿನಿ ಫರಾಳದ ನಿರೂಪಿಸಿದರು. ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
