ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ವಾಕ್ಸಮರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಬಬಲೇಶ್ವರ ಕ್ಷೇತ್ರದ ಚುನಾವಣಾ ರಾಜಕೀಯವನ್ನೇ ಮುಂದಿಟ್ಟು ಕೊಂಡು ಯತ್ನಾಳ ಅವರು ವಿಜುಗೌಡ ಪಾಟೀಲ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಈ ಆರೋಪಗಳಿಗೆ ವಿಜುಗೌಡ ಪಾಟೀಲ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ… ಯತ್ನಾಳರಿಗೆ ನೇರ ಸವಾಲನ್ನೂ ಹಾಕಿದ್ದಾರೆ. ಹಾಗಾದರೆ ವಿಜುಗೌಡ ಹಾಕಿದ ಸವಾಲೇನು? ಯತ್ನಾಳ ವಿರುದ್ಧ ಅವರು ಮಾಡಿರುವ ಆರೋಪಗಳೇನು? ನೋಡೋಣ ಈ ವರದಿಯಲ್ಲಿ…


ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಸಚಿವ ಎಂ.ಬಿ.ಪಾಟೀಲ ಹಾಗೂ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ನಡುವಿನ ಚುನಾವಣಾ ರಾಜಕೀಯವೇ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಬಬಲೇಶ್ವರ ದಲ್ಲಿಎಂ.ಬಿ.ಪಾಟೀಲ ವಿರುದ್ಧ ವಿಜುಗೌಡ ಪಾಟೀಲ ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜುಗೌಡ ಪಾಟೀಲರನ್ನು ಟಾರ್ಗೆಟ್ ಮಾಡಿದ್ದರು. ಎಂ.ಬಿ.ಪಾಟೀಲ ಗೆಲ್ಲಲೆಂದೇ ವಿಜುಗೌಡರನ್ನು ದುರ್ಬಲ ಅಭ್ಯರ್ಥಿಯಾಗಿ ಕಣಕ್ಕಿಳಿಸ ಲಾಗುತ್ತದೆ.ಯಡಿಯೂರಪ್ಪ ಅವರ ಬೆಂಬಲದೊಂದಿಗೆ ವಿಜುಗೌಡರನ್ನು ಎಂ.ಬಿ.ಪಾಟೀಲ ವಿರುದ್ಧ ಕಣಕ್ಕಿಳಿಸಲಾಗುತ್ತಿದೆ ಎಂದು ಯತ್ನಾಳ ಆರೋಪಿಸಿದ್ದರು. ಅಲ್ಲದೇ, ಎಂ.ಬಿ.ಪಾಟೀಲ ಹಾಗೂ ವಿಜುಗೌಡ ಪಾಟೀಲ ನಡುವೆ ಹೊಂದಾಣಿಕೆ ಇದೆ ಎಂಬ ಆರೋಪವನ್ನೂ ಮಾಡಿದ್ದರು.
‘ಎಂ.ಬಿ.ಪಾಟೀಲ ಯಾಕೆ ವಿಜುಗೌಡ ಪಾಟೀಲರ ತಲೆ ಒಡೆಯುತ್ತಾರೆ? ತಲೆ ಒಡೆದಿದ್ದು ಒಂದು ಕಡೆಯಾದರೆ, ಪಟ್ಟಿ ಹಾಕಿಕೊಂಡಿದ್ದು ಇನ್ನೊಂದು ಕಡೆ. ಎಂ.ಬಿ.ಪಾಟೀಲ ತಲೆ ಒಡೆಯುವಷ್ಟು ಕೆಟ್ಟ ರಾಜಕಾರಣಿ ಅಲ್ಲ’ ಎಂದು ಯತ್ನಾಳ ಹೇಳಿದ್ದರು. ಜೊತೆಗೆ, ‘ಎಂ.ಬಿ.ಪಾಟೀಲರ ಒಪ್ಪಂದ ಇದೆ, ನನ್ನ ಜೊತೆ ಅಲ್ಲ’ ಎಂದು ಯತ್ನಾಳ ಹೇಳಿಕೆ ನೀಡಿದ್ದರು.
ಇನ್ನೂ ಶಾಸಕ ಯತ್ನಾಳರ ಈ ಆರೋಪಗಳಿಗೆ ಇದೀಗ ವಿಜುಗೌಡ ಪಾಟೀಲ ತಿರುಗೇಟು ನೀಡಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಚಿವ ಎಂ.ಬಿ.ಪಾಟೀಲ ಸಾಕಿದ ಗಿಳಿ. ಎಂ.ಬಿ. ಪಾಟೀಲ ಹೇಳಿದಂತೆ ಕೇಳುವ ಗಿರಾಕಿ. ಅವರೇ ಇವರನ್ನು ಸಾಕಿಕೊಂಡು ಬಂದಿದ್ದಾರೆ. ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಒಳ ಒಪ್ಪಂದದ ರಾಜಕೀಯ ಮಾಡುತ್ತಾರೆ’ ಎಂದು ವಿಜುಗೌಡ ಪಾಟೀಲ ಆರೋಪಿಸಿದ್ದಾರೆ. ತಮ್ಮ ಮತ್ತು ಎಂ.ಬಿ.ಪಾಟೀಲ ನಡುವೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ವಿಜುಗೌಡ, ಎಂ.ಬಿ. ಪಾಟೀಲ ಜೊತೆ ನಾನು ಹೊಂದಾಣಿಕೆ ಮಾಡಿಕೊಂಡಿ ರುವುದನ್ನು ಯತ್ನಾಳ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದು ಸವಾಲು ಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ ವಿರುದ್ಧ 80 ಸಾವಿರಕ್ಕೂ ಹೆಚ್ಚು ಮತಗಳು ತಮ್ಮ ಪರವಾಗಿ ಬಂದಿವೆ. ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಹಣ ಖರ್ಚು ಮಾಡಿ ಚುನಾವಣೆ ಮಾಡಿದ್ದಾರೆ ಎಂದು ವಿಜುಗೌಡ ಹೇಳಿದ್ದಾರೆ. ಇನ್ನು, ಕಳೆದ ಚುನಾವಣೆ ಯಲ್ಲಿ ಯತ್ನಾಳ ಅವರನ್ನು ಬಬಲೇಶ್ವರ ಕ್ಷೇತ್ರಕ್ಕೆ ಪ್ರಚಾರಕ್ಕೆ ಕಳುಹಿಸ ಬಾರದು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆ. ಆದರೂ ಯತ್ನಾಳ ಬಂದು ‘ನೀರಾವರಿ ಮಾಡಿದವರಿಗೆ ವೋಟ್ ಹಾಕಿ’ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ ಪರ ಪ್ರಚಾರ ಮಾಡಿದ್ದಾರೆ ಎಂದು ವಿಜುಗೌಡ ಆರೋಪಿಸಿದ್ದಾರೆ. ಸವಾಲು ಇಷ್ಟಕ್ಕೇ ನಿಲ್ಲದ ವಿಜುಗೌಡ ಪಾಟೀಲ, ಯತ್ನಾಳರಿಗೆ ನೇರ ಸವಾಲು ಹಾಕಿದ್ದಾರೆ. ಯತ್ನಾಳ ಮತ್ತು ಎಂ.ಬಿ.ಪಾಟೀಲ ನಡುವೆ ಹೊಂದಾಣಿಕೆ ಇಲ್ಲ ಎನ್ನುವು ದಾದರೆ, ಮುಂದಿನ ಚುನಾವಣೆಯಲ್ಲಿ ತಾಕತ್ತಿದ್ದರೆ ಎಂ.ಬಿ.ಪಾಟೀಲ ವಿರುದ್ಧ ಬಬಲೇಶ್ವರ ಕ್ಷೇತ್ರದಲ್ಲಿ ಯತ್ನಾಳ ಸ್ಪರ್ಧಿಸಲಿ. ನಾನು ವಿಜಯಪುರ ದಲ್ಲಿ ನಿಲ್ಲುತ್ತೇನೆ’ ಎಂದು ಸವಾಲು ಹಾಕಿದ್ದಾರೆ. ಅಲ್ಲದೇ, ಸೆಪ್ಟೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಅರಕೇರಿ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ಬಂದು, ಎಂ.ಬಿ. ಪಾಟೀಲ ಜೊತೆ ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ವಿಜುಗೌಡ ಪಾಟೀಲ ಹೇಳಿದ್ದಾರೆ.
ಒಟ್ನಲ್ಲಿ ಎಂ.ಬಿ.ಪಾಟೀಲ– ಯತ್ನಾಳ ನಡುವಿನ ರಾಜಕೀಯ ಜಟಾಪಟಿಯಲ್ಲಿ ಇದೀಗ ವಿಜುಗೌಡ ಪಾಟೀಲ ಎಂಟ್ರಿ ಕೊಟ್ಟಿದ್ದಾರೆ. ಹೊಂದಾಣಿಕೆ ಆರೋಪಕ್ಕೆ ರಾಜಕೀಯ ನಿವೃತ್ತಿಯ ಸವಾಲು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆಯ ಸವಾಲು. ದೇವರ ಮುಂದೆ ಪ್ರಮಾಣ ಮಾಡುವಂತೆ ಮತ್ತೊಂದು ಸವಾಲು. ವಿಜಯಪುರ ಬಿಜೆಪಿಯೊಳಗಿನ ಈ ವಾಕ್ಸಮರ ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದು ಸದ್ಯದ ಕುತೂಹಲವಾಗಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ
