ತಾಲ್ಲೂಕಿನ ಹತರವಾಟ ಕ್ರಾಸ್ ಬಳಿ ಕಾರು ಮತ್ತು ಡಂಪರ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿವೃತ್ತ ಮುಖ್ಯೋಪಾಧ್ಯಾಯರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಅವರ ಪುತ್ರ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ.

ಕರೋಶಿ ಗ್ರಾಮದ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಅಬ್ದುಲ್ ಸತ್ತಾರ್ ಪಟೇಲ್ (78) ಮೃತಪಟ್ಟ ದುರ್ದೈವಿಯಾಗಿದ್ದು, ಅವರ ಪುತ್ರ ಮೌಲಾನಾ ನೋಮಾನ್ ಪಟೇಲ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಬ್ದುಲ್ ಸತ್ತಾರ್ ಪಟೇಲ್ ಹಾಗೂ ಅವರ ಪುತ್ರ ಮೌಲಾನಾ ನೋಮಾನ್ ಪಟೇಲ್ ಅವರು ತಮ್ಮ ಸ್ವಂತ ಕಾರಿನಲ್ಲಿ ಕೊಲ್ಹಾಪುರದಿಂದ ಕರೋಶಿ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಚಿಕ್ಕೋಡಿ-ಬೆಳಗಾವಿ ರಸ್ತೆಯ ಹತರವಾಟ ಕ್ರಾಸ್ ಬಳಿ ಬರುತ್ತಿದ್ದಂತೆ ಎದುರಿನಿಂದ ಬಂದ ಡಂಪರ್ ವಾಹನ ಹಾಗೂ ಕಾರಿನ ನಡುವೆ ಪ್ರಚಂಡ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ತಂದೆ-ಮಗ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಬ್ದುಲ್ ಸತ್ತಾರ್ ಪಟೇಲ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಅತಿಯಾದ ರಕ್ತಸ್ರಾವವಾದ್ದರಿಂದ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಕೆಎಲ್‌ಇ (KLE) ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಪುತ್ರ ಮೌಲಾನಾ ನೋಮಾನ್ ಅವರಿಗೆ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೃತ ಅಬ್ದುಲ್ ಸತ್ತಾರ್ ಪಟೇಲ್ ಅವರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಕರೋಶಿಯಲ್ಲಿ ನೆರವೇರಿಸಲಾಯಿತು. ಘಟನೆಯಿಂದಾಗಿ ಕರೋಶಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದೆ.
