Vijaypura

12 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಹಂತಕ..! ಫಿಂಗರ್‌ಪ್ರಿಂಟ್‌ನಿಂದ ಬಯಲಾಯ್ತು ಅಸಲಿ ಗುರುತು..!

Share

ಆತ ಜೈಲಿನಿಂದ ಎಸ್ಕೇಪ್ ಆಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೊಲೆ ಆರೋಪಿ… 12 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ, ಗುರುತು ಬದಲಿಸಿಕೊಂಡು ಬದುಕಿದ್ದ… ಆದ್ರೆ, ಕಾಲ ಕಳೆದರೂ ಕೇಸ್ ಮುಚ್ಚಲಿಲ್ಲ… ಪೊಲೀಸರ ತನಿಖೆಯೂ ನಿಲ್ಲಲಿಲ್ಲ… ಕೊನೆಗೂ ತಂತ್ರಜ್ಞಾನವೇ ಆತನಿಗೆ ಮುಳುವಾಗಿದೆ. 12 ವರ್ಷಗಳ ಬಳಿಕ ಫಿಂಗರ್‌ಪ್ರಿಂಟ್ ಮೂಲಕ ಖತರ್ನಾಕ್ ಹಂತಕನ ಅಸಲಿ ಗುರುತು ಪತ್ತೆ ಹಚ್ಚಿರುವ ವಿಜಯಪುರ ಪೊಲೀಸರು, ಸಿನಿಮೀಯ ರೀತಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ 12 ವರ್ಷಗಳ ಕಾಲ ಆತ ಎಲ್ಲಿದ್ದ? ಹೇಗೆ ಬದುಕಿದ್ದ? ಪೊಲೀಸರು ಆತನನ್ನು ಹೇಗೆ ಪತ್ತೆ ಹಚ್ಚಿದ್ರು? ಇದೇ ಒಂದು ರೋಚಕ ಬೇಟೆಯ ಕಥೆ…

ಇದು ಬರೋಬ್ಬರಿ 12 ವರ್ಷಗಳ ಹಿಂದಿನ ಕಥೆ… ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿ ಬಸವರಾಜ್ ಪಾಟೀಲ್. 2009ರಲ್ಲಿ ಬಾಗಲಕೋಟೆಯ ಕೃಷಿ ಅಧಿಕಾರಿ ಹನಿಟ್ರಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಜೈಲು ಸೇರಿದ್ದ ಬಸವರಾಜ್ ಪಾಟೀಲ್, 2014ರಲ್ಲಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದ. ಅಲ್ಲಿಂದ ಶುರುವಾಗಿತ್ತು ಪೊಲೀಸರ ಹುಡುಕಾಟ… ಆದ್ರೆ, ಬಸವರಾಜ್ ಮಾತ್ರ ಪೊಲೀಸರ ಕಣ್ಣಿಗೆ ಬೀಳಲೇ ಇಲ್ಲ. ಕುಟುಂಬದವರ ಸಂಪರ್ಕಕ್ಕೂ ಬಾರದೆ, ತನ್ನ ಗುರುತನ್ನೇ ಬದಲಿಸಿಕೊಂಡು ಜೀವನ ನಡೆಸುತ್ತಿದ್ದ.

ದಾಡಿ… ಉದ್ದ ಕೂದಲು… ಬದಲಾದ ವೇಷ… ಹೀಗೆ ಗುರುತೇ ಸಿಗದಂತೆ ಮಾಡಿಕೊಂಡಿದ್ದ ಬಸವರಾಜ್, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ದಸಮುದ್ರ ಗ್ರಾಮದಲ್ಲಿ ಆಶ್ರಯ ಪಡೆದಿದ್ದ. ಅಲ್ಲಿ ಜಮೀನೊಂದನ್ನು ಲೀಸ್‌ಗೆ ಪಡೆದು ಕೃಷಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ. ಅಷ್ಟೇ ಅಲ್ಲ… ಅಲ್ಲಿಯೇ ಮಹಿಳೆಯೊಬ್ಬರ ಜೊತೆ ಸಂಬಂಧ ಬೆಳೆಸಿಕೊಂಡು, ಹೊಸ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಇತ್ತ ಹಳೆ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಗಾಂಧಿಚೌಕ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ತಳಕೇರಿ ಅವರಿಗೆ ಬಸವರಾಜ್ ಕುರಿತ ಸುಳಿವು ಸಿಕ್ಕಿತ್ತು. ಕಾಲ್ ಡಿಟೇಲ್ಸ್… ಲೊಕೇಶನ್… ಹೀಗೆ ಒಂದೊಂದೇ ಕೊಂಡಿಗಳನ್ನು ಜೋಡಿಸುತ್ತಾ ಹೋದ ಪೊಲೀಸರು, ಕೊನೆಗೆ ಸಿದ್ದಸಮುದ್ರ ತಲುಪಿದ್ದರು. ಅಲ್ಲಿ ಬಸವರಾಜ್ ಪೊಲೀಸರ ಕೈಗೆ ಸಿಕ್ಕಿಬಿದ್ದ. ಆದ್ರೆ… ಪೊಲೀಸರ ಮುಂದೆ ಆತ ಆಡಿದ ನಾಟಕವೇ ಬೇರೆ! “ನಾನು ಬಸವರಾಜ್ ಪಾಟೀಲ್ ಅಲ್ಲ…” ಎಂದು ಪೊಲೀಸರನ್ನೇ ನಂಬಿಸಲು ಯತ್ನಿಸಿದ್ದ. ಆದ್ರೆ ಪೊಲೀಸರ ಬಳಿ ಇತ್ತು ಮತ್ತೊಂದು ಅಸ್ತ್ರ… ಫಿಂಗರ್‌ಪ್ರಿಂಟ್! ಕೊಲೆ ಪ್ರಕರಣ ನಡೆದಾಗಲೇ ಸಂಗ್ರಹಿಸಿದ್ದ ಬಸವರಾಜ್‌ನ ಬೆರಳಚ್ಚು… ಈಗ ಪೊಲೀಸರಿಗೆ ಸಿಕ್ಕ ವ್ಯಕ್ತಿಯ ಫಿಂಗರ್‌ಪ್ರಿಂಟ್‌ನೊಂದಿಗೆ ಪರಿಶೀಲಿಸಲಾಯಿತು. ಮ್ಯಾಚ್…! ಅಷ್ಟೇ… 12 ವರ್ಷಗಳ ಕಾಲ ಬಚ್ಚಿಟ್ಟಿದ್ದ ಅಸಲಿ ಗುರುತು ಕ್ಷಣಾರ್ಧದಲ್ಲಿ ಬಯಲಾಯ್ತು. ತಂತ್ರಜ್ಞಾನ ಹಾಗೂ ಪೊಲೀಸರ ತನಿಖಾ ಕೌಶಲ್ಯದ ಮುಂದೆ ಬಸವರಾಜ್‌ನ ನಾಟಕವೂ ಬಯಲಾಯಿತು.

ಒಟ್ನಲ್ಲಿ 12 ವರ್ಷಗಳ ಕಾಲ ಪೊಲೀಸರ ಕಣ್ತಪ್ಪಿಸಿ… ಗುರುತು ಬದಲಿಸಿಕೊಂಡು… ಹೊಸ ಜೀವನ ಕಟ್ಟಿಕೊಂಡಿದ್ದ ಜೀವಾವಧಿ ಶಿಕ್ಷೆಯ ಕೈದಿ… ಕೊನೆಗೂ ಕಾನೂನಿನ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೇಸ್‌ನ ಹಳೆಯ ಸುಳಿವುಗಳನ್ನು ಮತ್ತೆ ಕೆದಕಿ, ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ, ಫಿಂಗರ್‌ಪ್ರಿಂಟ್ ಮೂಲಕ ಅಸಲಿ ಆರೋಪಿಯನ್ನು ಪತ್ತೆ ಹಚ್ಚಿದ ಗಾಂಧಿಚೌಕ್ ಪೊಲೀಸ್ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ. ಕಾನೂನಿನಿಂದ ಎಷ್ಟೇ ವರ್ಷ ತಪ್ಪಿಸಿಕೊಂಡರೂ… ಅಪರಾಧಿಯ ಗುರುತು ಎಂದಿಗೂ ಅಳಿಸಿಹೋಗುವುದಿಲ್ಲ ಎಂಬುದಕ್ಕೆ ಬಸವರಾಜ್ ಪಾಟೀಲ್ ಪ್ರಕರಣವೇ ಸಾಕ್ಷಿ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!