ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದಿರುವ ಇ.ಡಿ. ದಾಳಿ ವಿಚಾರ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ವಿಜಯಪುರದಲ್ಲಿ ಮಾಜಿ ಸಚಿವ ಶಿವಾನಂದ ಪಾಟೀಲ್, ಇ.ಡಿ. ದಾಳಿಗಳನ್ನೇ ಪ್ರಶ್ನಿಸಿದ್ದು, ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಇ.ಡಿ.ಯನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇ.ಡಿ. ದಾಳಿಗಳು ನಡೆಯಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಆದರೆ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಇ.ಡಿ. ಈಗ ಪೊಲಿಟಿಕಲ್ ಟೂಲ್ ಆಗಬಾರದು ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.

ಇ.ಡಿ. ದಾಳಿ ನಡೆಸಿ ಬಳಿಕ ಬಿಜೆಪಿ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದ ಅವರು, ಮಹಾರಾಷ್ಟ್ರದ ಅಜಿತ್ ಪವಾರ್ ಹಾಗೂ ಅಶೋಕ್ ಚವಾಣ್ ಪ್ರಕರಣಗಳನ್ನು ಉದಾಹರಣೆಯಾಗಿ ನೀಡಿದರು. ಇ.ಡಿ. ದಾಳಿಗೊಳಗಾದ ಹಲವರು ಕಾಂಗ್ರೆಸ್ ತೊರೆದಿದ್ದಾರೆ. ಇದರಿಂದ ಏನು ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದರು.
ಇನ್ನು ಡಿ.ಕೆ. ಶಿವಕುಮಾರ್ ಸಾಫ್ಟ್ ಆಗಿದ್ದಾರೆ ಎಂಬ ಚರ್ಚೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ್, ಸಿಎಂ ಸಾಫ್ಟ್ ಆಗಿದ್ದರೆ ಒಳ್ಳೆಯದೇ. ಆದರೆ 100 ದಿನಗಳಲ್ಲಿ ಒಬ್ಬ ಮನುಷ್ಯ ಈ ರೀತಿ ಬದಲಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರನ್ನು ಡಿ.ಕೆ. ಶಿವಕುಮಾರ್ ಭೇಟಿಯಾಗಿರುವುದರ ಬಗ್ಗೆಯೂ ಮಾತನಾಡಿದ ಅವರು, ಇದು ಫೆಡರಲ್ ಸಿಸ್ಟಮ್. ಪ್ರಧಾನಿಯ ಬಳಿ ರಾಜ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಹೋಗದೆ ಇನ್ನೇನು ತೆಗೆದುಕೊಂಡು ಹೋಗಬೇಕು? ಎಂದು ಪ್ರಶ್ನಿಸಿದರು.
ತಾವು 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಬಿಜೆಪಿಗೆ ಹೋಗಿದ್ದೆ ಎಂದು ಹೇಳಿದ ಶಿವಾನಂದ ಪಾಟೀಲ್, ವಾಜಪೇಯಿ ಅವರಂತಹ ವ್ಯಕ್ತಿತ್ವದ ನಾಯಕ ಈಗ ಯಾರಿದ್ದಾರೆ? ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಇ.ಡಿ. ದಾಳಿಯನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಶಿವಾನಂದ ಪಾಟೀಲ್ ರಾಜಕೀಯ ಅಸ್ತ್ರ ಪ್ರಯೋಗಿಸಿದ್ದಾರೆ.
