Vijaypura

ವಿಜಯಪುರದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ..! ದೈಹಿಕ ಪರೀಕ್ಷೆಗೆ ಯುವಕರ ಉತ್ಸಾಹದ ಸ್ಪಂದನೆ..!!

Share

ವಿಜಯಪುರದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ ಭರ್ಜರಿಯಾಗಿ ನಡೆಯುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೆ.10ರಿಂದ ಆರಂಭವಾಗಿರುವ ರ‍್ಯಾಲಿ ಸೆ.22ರವರೆಗೆ ನಡೆಯಲಿದ್ದು, 11 ಜಿಲ್ಲೆಗಳ 8,500ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಯುವಕರ ಉತ್ಸಾಹ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವರದಿ ಇಲ್ಲಿದೆ ನೋಡಿ…

ಭಾರತೀಯ ಸೇನೆ ಸೇರಬೇಕು… ದೇಶ ಸೇವೆ ಮಾಡಬೇಕು ಎಂಬ ಕನಸು ಹೊತ್ತ ಯುವಕರಿಗೆ ವಿಜಯಪುರದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ ಆರಂಭವಾಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ವಿಜಯಪುರ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿದಂತೆ 11 ಜಿಲ್ಲೆಗಳ 8,500ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳಿಗೆ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಜೂನ್ 1ರಿಂದ 12ರವರೆಗೆ ನಡೆದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಇದೀಗ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಎದುರಿಸುತ್ತಿದ್ದಾರೆ. ಮೈದಾನದಲ್ಲಿ ಯುವಕರು ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ಇನ್ನೂ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಆನ್‌ಲೈನ್ ಪರೀಕ್ಷೆಯ ಫಲಿತಾಂಶ, ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರ ನೀಡಲಾಗಿದ್ದು, ತಮ್ಮ ಖಾತೆ ಅಥವಾ ನೋಂದಾಯಿತ ಇ-ಮೇಲ್ ಮೂಲಕವೂ ಪಡೆಯಬಹುದಾಗಿದೆ. ಯಾವುದೇ ಮಧ್ಯವರ್ತಿಗಳಿಂದ ಮೋಸ ಹೋಗದಂತೆ ಸೇನಾ ಅಧಿಕಾರಿಗಳು ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಂಗಳೂರಿನ ಸೇನಾ ಭರ್ತಿ ಕಚೇರಿಯ ಅಧಿಕಾರಿ ಕರ್ನಲ್ ಸೋಮು ಮಹಾರಾಜನ್ ಹಾಗೂ ವಿಜಯಪುರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ವಿನಯ ಕುಮಾರ್ ಪಾಟೀಲ ಮಾಹಿತಿ ನೀಡಿದ್ದಾರೆ.

ಒಟ್ಟಾರೆ, ವಿಜಯಪುರದ ಕ್ರೀಡಾಂಗಣದಲ್ಲಿ ದೇಶ ಸೇವೆಯ ಕನಸು ಹೊತ್ತ ಯುವಕರ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿದೆ. ಪರಿಶ್ರಮ, ಸಾಮರ್ಥ್ಯ ಹಾಗೂ ಅರ್ಹತೆಯ ಆಧಾರದ ಮೇಲೆ ಅಗ್ನಿವೀರರ ಆಯ್ಕೆ ನಡೆಯಲಿದೆ. ಯುವಕರು ಬಹು ಉತ್ಸಾಹದಿಂದ ಪಾಲ್ಗೊಂಡು ದೇಶ ಸೇವೆಗೆ ಸಿದ್ದ ಎಂದು ತೋರಿಸಿಕೊಡುತ್ತಿದ್ದಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!