ಬೆಳಗಾವಿ ನಗರದ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ವಾಹನ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಖಾದರವಾಡಿ ನಿವಾಸಿ ದೌಲತ ಮನೋಹರ ಪಾಟೀಲ ಎಂಬುವವರ ಮೋಟಾರ್ ಸೈಕಲ್ ಕಳುವಾದ ಬಗ್ಗೆ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಸಿಪಿ ಶೇಖರಪ್ಪ ಹೆಚ್. ಮಾರ್ಗದರ್ಶನ ಹಾಗೂ ಇನ್ಸ್ಪೆಕ್ಟರ್ ಮಹಾಂತೇಶ ಹೊಸಪೇಟೆ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು. ಬಂಧಿತ ಆರೋಪಿಯನ್ನು ಅನಗೋಳದ ಜಟಪಟ ಕಾಲನಿ ನಿವಾಸಿ ರಿಯಾನ ಇಮ್ತಿಯಾಜ ಶೇಖ್ @ ರಮೇಶ ಅರ್ಜುನ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉದ್ಯಮಬಾಗ ಹಾಗೂ ಬೆಳಗಾವಿ ನಗರ ಮತ್ತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಈತನಿಂದ ಒಟ್ಟು 2,65,000 ರೂಪಾಯಿ ಮೌಲ್ಯದ 7 ಮೋಟಾರ್ ಸೈಕಲ್ಗಳು ಮತ್ತು 1 ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಯ ಸಾಹಸವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

