ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಗಣೇಶೋತ್ಸವವನ್ನು ಅತ್ಯಂತ ಕಟ್ಟುನಿಟ್ಟಿನ ಹಾಗೂ ಶಾಂತಿಯುತ ವಾತಾವರಣದಲ್ಲಿ ಆಚರಿಸಲು ಜಿಲ್ಲಾ ಪೊಲೀಸ್ ಆಡಳಿತ ಸಜ್ಜಾಗಿದೆ. ಹಬ್ಬದ ವೇಳೆ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಹೈಟೆಕ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದ್ದು, ಸಂಪ್ರದಾಯಕ್ಕೆ ಮೀರಿದ ಡಿಜೆ ಬಳಕೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಪ್ರದೇಶಗಳಲ್ಲಿ ಈ ಬಾರಿ ಒಟ್ಟು 6,677 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ 692 ಕಡೆ ಶಾಂತಿ ಸಭೆಗಳನ್ನು ನಡೆಸಲಾಗಿದ್ದು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ 5,867 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು, ಕೆಲವರನ್ನು ಗಡಿಪಾರು ಮಾಡುವುದರ ಜೊತೆಗೆ ನಾಲ್ಕು ಜನರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಗಾಂಜಾ ಮಾರಾಟಗಾರರ ಮೇಲೂ ಕಾನೂನಿನಾ9 ಕಠಿಣ ಚಾಟಿ ಬೀಸಲಾಗಿದೆ.

ಗಣೇಶೋತ್ಸವದ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದು, ಡ್ರೋನ್ ಕ್ಯಾಮೆರಾಗಳು, 83 ಕಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಯಾಮೆರಾಗಳು ಹಾಗೂ ಬರೋಬ್ಬರಿ 28 ಸಾವಿರ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣ, ಪಟಾಕಿ ಸಿಡಿಸುವಿಕೆ, ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಗಳ ಮೇಲೂ ಹಗಲು-ರಾತ್ರಿ ಕಾವಲು ಇರಲಿದೆ. ಮಂಡಳದ ಕಾರ್ಯಕರ್ತರು ಕಡ್ಡಾಯವಾಗಿ ಮಂಟಪದಲ್ಲಿ ಉಪಸ್ಥಿತರಿರಬೇಕು ಎಂದು ಎಚ್ಚರಿಸಿರುವ ಎಸ್ಪಿ, ಕೋಮು ಗಲಭೆಗಳು ಸಂಭವಿಸಿದರೆ ನೇರವಾಗಿ ಆಯೋಜಕರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಡಿಜೆ ಸೌಂಡ್ ಸಿಸ್ಟಮ್ ಬಳಕೆಯ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿರುವ ಎಸ್ಪಿ ಕೆ. ರಾಮರಾಜನ್, ಆಸ್ಪತ್ರೆಗಳ ಬಳಿ ಅತಿಶಯವಾದ ಶಬ್ಧದಿಂದ ವೃದ್ಧರು ಹಾಗೂ ರೋಗಿಗಳಿಗೆ ತೀವ್ರ ಕಿರಿಕಿರಿಯಾಗುತ್ತದೆ ಎಂದಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿಲ್ಲದ ಡಿಜೆ ಸಂಸ್ಕೃತಿಯಿಂದಾಗಿ ಸ್ಥಳೀಯ ನಿಜವಾದ ಕಲಾ ಪ್ರಕಾರಗಳಿಗೆ ಅವಕಾಶ ಸಿಗುತ್ತಿಲ್ಲ. ಅತಿಯಾದ ಶಬ್ಧದಿಂದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಶ್ರವಣ ಶಕ್ತಿಯನ್ನೇ ಕಳೆದುಕೊಂಡಿರುವುದು ದುರ್ದೈವದ ಸಂಗತಿ. ಮಹಿಳೆಯರು, ಗರ್ಭಿಣಿಯರು ಮತ್ತು ಮಕ್ಕಳು ಭಯವಿಲ್ಲದೆ ಉತ್ಸವ ವೀಕ್ಷಿಸುವಂತಹ ವಾತಾವರಣವನ್ನು ನಿರ್ಮಿಸಲು ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.
