ಕಾಶಿ ಜ್ಞಾನ ಸಿಂಹಾಸನ ಮಹಾಪೀಠದಿಂದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಬೆಳಗಾವಿ ಅಜಂನಗರದಲ್ಲಿ ಜರುಗಿದ ವೀರಶೈವ ಪಂಚಸೂತ್ರಿಯ ಪ್ರವಚನವನ್ನು ಒಂದು ತಿಂಗಳವರೆಗೆ ಅದ್ಬುತವಾಗಿ ನೀಡಿದ ದಿವ್ಯಾ ಅಂಗಡಿ ಅವರಿಗೆ ವೀರಶೈವ ಪಂಚಸೂತ್ರಿಯ ಪ್ರವಚನ ಚಂದ್ರಿಕೆ ಎಂಬ ಪ್ರಶಸ್ತಿ ನೀಡಿ ಆಶೀರ್ವದಿಸಿದರು.
ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹಾಗೂ ಬೆಳಗಾವಿ ಹುಕ್ಕೇರಿ ಹಿರೇಮಠ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಮೂಲಕ ಈ ಪ್ರಶಸ್ತಿಯನ್ನು ಜಗದ್ಗುರುಗಳು ದಿವ್ಯ ಅಂಗಡಿ ಅವರಿಗೆ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಜಗದ್ಗುರುಗಳು ದೂರವಾಣಿ ಮೂಲಕ ಮಾತನಾಡಿ, ವೀರಶೈವ ಪಂಚಸೂತ್ರಿಯ ಪ್ರವಚನದಲ್ಲಿ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಪೀಠದ ಮಹತ್ವಪೂರ್ಣ ಪರಿಚಯವಿದೆ. ವೀರಶೈವ ಧರ್ಮದ ಉಘಮ, ವಿಚಾರಗಳನ್ನು ತಿಳಿಸುವಂಥ ಪ್ರಯತ್ನವನ್ನು ನಾವು ಈ ಗ್ರಂಥದಲ್ಲಿ ಮಾಡಿದ್ದೇವೆ. ಕೇವಲ ಸ್ವಾಮೀಜಿಗಳಷ್ಟೆ ಪ್ರವಚನ ಮಾಡಬಾರದು. ಭಕ್ತರೂ ಮಾಡಬೇಕು ಎನ್ನುವುದಕ್ಕೆ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದಿವ್ಯಾ ಅಂಗಡಿ ಅವರು ಒಂದು ತಿಂಗಳುಗಳ ಕಾಲ ಪ್ರವಚನ ಮಾಡಿರುವುದು ಸಂತಸ ತಂದಿದೆ ಈ ಗ್ರಂಥವನ್ನು ಎಲ್ಲರೂ ಓದಬೇಕು ಎಂದರು.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಕಾಶಿ ಜಗದ್ಗುರು ಎಂದರೆ ನಡೆದಾಡುವ ಸಿದ್ಧಾಂತ ಶಿಖಾಮಣಿ. ಇವರು ರಚಿಸಿದ ಮಹಾನ್ ಗ್ರಂಥವೇ ವೀರಶೈವ ಪಂಚಸೂತ್ರಿಯ ಪ್ರವಚನ. ಈ ಗ್ರಂಥವನ್ನು ಒಂದು ತಿಂಗಳುಗಳ ಕಾಲ ದಿವ್ಯ ಅಂಗಡಿ ಹೇಳಿದ್ದಾರೆ ಎಂದರೆ ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾನು ಬಹಳಷ್ಟು ಜನರಿಗೆ ದೀಕ್ಷೆ ನೀಡಿದ್ದೇವೆ. ಆದರೆ ಇಷ್ಟಲಿಂಗ ದೀಕ್ಷೆ ಪಡೆದಿರುವ ದಿವ್ಯಾ ಅಂಗಡಿ ಕೇವಲ ಲಿಂಗ ದೀಕ್ಷೆ ಪೂಜೆ ಅಷ್ಟೆ ಮಾಡದೆ ಪ್ರವಚನದ ಸಾಧನೆಗೆ ಇಳಿದಿರುವುದು ಸಂತೋಷ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಣುಕಾಶ್ರಮದ ಧರ್ಮಾಧಿಕಾರಿ ಮಾತೋಶ್ರಿ ಗಂಗಾಮಾತಾಜಿ ಮಾತನಾಡಿ, ರೇಣುಕಾಶ್ರಮದಲ್ಲಿ ಭಕ್ತರೇ ಪ್ರವಚನ ಮಾಡುತ್ತಾರೆ. ಇವತ್ತು ರೇಣುಕಾಶ್ರಮ ಇಷ್ಟು ಮುಂದೆ ಬಂದಿದೆ ಎಂದರೆ ಭುವನೇಶ್ವರಿ ಮುರುನಾಳ, ಇಂದಿರಾ ಶಂಕರಗೌಡ, ವಸಂತಗೀತ ಹಿರೇಮಠ, ನಯನಾ ಗಿರಿಗೌಡರ, ಸುನೀತಾ ಪಾಟೀಲ್, ಬಸವರಾಜ ಗೋಮಾಡೆ ಇವರು ಕೂಡ ಪ್ರವಚನ ಎಂದರೆ ಇದರ ಹಿಂದೆ ಗುರುಗಳ ಆಶೀರ್ವಾದವೇ ಕಾರಣ ಎಂದರು.
ಪ್ರಶಸ್ತಿ ಸ್ವೀಕರಿಸಿದ ದಿವ್ಯಾ ಅಂಗಡಿ ಮಾತನಾಡಿ, ಇದು ನನ್ನ ಭಾಗ್ಯ. ನನಗೆ ಚಿಕ್ಕ ವಯಸ್ಸಿನಲ್ಲೇ ಕಾಶಿ ಮಹಾಪೀಠದಿಂದ ಪ್ರಶಸ್ತಿ ದೊರಕಿರುವುದು ಈ ಪ್ರಶಸ್ತಿ ಇನ್ನೂ ಜವಾಬ್ದಾರಿ ನೀಡುತ್ತಿದೆ. ನಾನು ಸಿದ್ಧಾಂತ ಶಿಖಾಮಣಿಯನ್ನು ಚಿಕ್ಕ ವಯಸ್ಸಿನಲ್ಲೇ ಗುರುಗಳಿಂದ ಕೇಳಿದ್ದೇನೆ. ಇವತ್ತು ಅವರ ಆಶೀರ್ವಾದ ವೀರಶೈವ ಪಂಚಸೂತ್ರಿಯ ಪ್ರವಚನ್ನು ಮಾಡಿ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಭಾಗ್ಯ ಎಂದರು.

