ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರು ಹಾಗೂ ಸಂಬಂಧಿಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ಸುದೀರ್ಘ ತೀವ್ರ ಶೋಧ ಕಾರ್ಯಾಚರಣೆ ಈಗ ಅಧಿಕೃತವಾಗಿ ಅಂತ್ಯಗೊಂಡಿದ್ದು, ಅಭಿಮಾನಿಗಳಲ್ಲಿ ಹರ್ಷ ಮನೆಮಾಡಿದೆ.

ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಗೋವಾ ಸೇರಿದಂತೆ ಒಟ್ಟು ಹದಿನೈದಿಂತ ಅಧಿಕ ಸ್ಥಳಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬದವರು ಹಾಗೂ ಆಪ್ತರ ಮನೆಗಳು ಮತ್ತು ಕಚೇರಿಗಳ ಮೇಲೆ ನಡೆದಿದ್ದ ಜಾರಿ ನಿರ್ದೇಶನಾಲಯದ (ED) ಮಹತ್ವದ ಶೋಧ ಕಾರ್ಯಾಚರಣೆಯು ಅಂತ್ಯಗೊಂಡಿದೆ. ಸೆಪ್ಟೆಂಬರ್ ಒಂಬತ್ತರಂದು ಬೆಳ್ಳಂಬೆಳಗ್ಗೆ ಏಳು ಗಂಟೆಗೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು, ಹಗಲು-ರಾತ್ರಿ ಎನ್ನದೆ ಸುದೀರ್ಘ ತಡರಾತ್ರಿವರೆಗೂ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಸುದೀರ್ಘ ಕಾರ್ಯಾಚರಣೆಯ ಸಂದರ್ಭದಲ್ಲಿ ನಗದು, ಅಪಾರ ಪ್ರಮಾಣದ ಚಿನ್ನಾಭರಣಗಳು, ಸ್ಥಿರ-ಚರ ಆಸ್ತಿಗಳ ದಾಖಲೆ ಪತ್ರಗಳು, ವಿವಿಧ ಹೂಡಿಕೆಗಳು ಹಾಗೂ ಶಂಕಿತ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಅತಿ ಪ್ರಮುಖವಾದ ಕಡತಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಚಿವರ ಸಂಬಂಧಿ ವೈ. ಮಂಜುನಾಥ್ ಹಾಗೂ ಆಪ್ತರಾದ ಧರಗಶೆಟ್ಟಿ, ನರಸಣ್ಣವರ, ಡಾ. ಸೋನವಾಲ್ಕರ್ ಮತ್ತು ಮಲಗೌಡ ಪಾಟೀಲ್ ಅವರ ನಿವಾಸಗಳಲ್ಲೂ ಸಹ ಸುದೀರ್ಘ ವಿಚಾರಣೆ ಹಾಗೂ ಶೋಧ ಕಾರ್ಯ ನಡೆಸಲಾಗಿದೆ.
ಗೋಕಾಕಿನ ಹಿಲ್ಸ್ ಗಾರ್ಡನ್ನಲ್ಲಿರುವ ನಿವಾಸಕ್ಕೆ ಇಂಡಿಯನ್ ಬ್ಯಾಂಕ್ ಸಿಬ್ಬಂದಿ ದೊಡ್ಡ ಪೆಟ್ಟಿಗೆಗಳೊಂದಿಗೆ ಆಗಮಿಸಿ ಬ್ಯಾಂಕ್ ವಹಿವಾಟುಗಳ ಪರಿಶೀಲನೆ ನಡೆಸಿದ್ದಾರೆ. ಸಂಜೆಯಾಗುತ್ತಿದ್ದಂತೆ ಬೆಂಗಳೂರು, ಬೆಳಗಾವಿ ಹಾಗೂ ಗೋಕಾಕಿನ ಎಲ್ಲಾ ಕಡೆಯೂ ತಪಾಸಣೆ ಅಧಿಕೃತವಾಗಿ ಅಂತ್ಯಗೊಂಡಿದೆ. ದಾಳಿ ಮುಕ್ತಾಯಗೊಂಡು ನಿವಾಸದಿಂದ ಸಚಿವರು ಹೊರಬರುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳಲ್ಲಿ ಹರ್ಷೋದ್ಗಾರ ಮನೆ ಮಾಡಿದ್ದು, ಜಾರಿ ನಿರ್ದೇಶನಾಲಯದ ಅಧಿಕೃತ ಪ್ರಕಟಣೆಯ ಬಳಿಕ ವಶಪಡಿಸಿಕೊಂಡ ದಾಖಲೆಗಳ ನೈಜ ವಿವರಗಳು ಹೊರಬರಲಿವೆ.
