Chikkodi

ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ: ಚಿಕ್ಕೋಡಿಯಲ್ಲಿ ಪ್ರತಿಭಟನೆ, ಮಾನವ ಸರಪಳಿ ನಿರ್ಮಾಣ

Share

ಚಿಕ್ಕೋಡಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ದಾಳಿಯನ್ನು ಖಂಡಿಸಿ, ಚಿಕ್ಕೋಡಿಯಲ್ಲಿ ಅವರ ನೂರಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸಂಸದರ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಮಾರ್ಗಗಳ ಮೂಲಕ ಸಾಗಿ ಬಸವ ವೃತ್ತವನ್ನು ತಲುಪಿತು. ಅಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭೀತಿಯಿಂದ ಹಾಗೂ ಅವರ ರಾಜಕೀಯ ಏಳಿಗೆಯನ್ನು ಸಹಿಸದೇ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಇ.ಡಿ. ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಯುವ ಮುಖಂಡ ಜೀವನ ಮಾಂಜ್ರೇಕರ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ಅರ್ಜುನ ನಾಯಿಕವಾಡಿ ಹಾಗೂ ರಾಜು ಕೊಟಗಿಯವರು ಕೇಂದ್ರದ ಬಿಜೆಪಿ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು, ವಿಶೇಷವಾಗಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಸತೀಶ್ ಜಾರಕಿಹೊಳಿ ಅವರ ಜನಪ್ರಿಯತೆಯನ್ನು ಸಹಿಸದೇ ಈ ರೀತಿ ದಾಳಿ ನಡೆಸಲಾಗಿದೆ. ಆದರೆ ಜಾರಕಿಹೊಳಿ ಅವರು ಈ ದಾಳಿಗೆ ಕಾನೂನಾತ್ಮಕವಾಗಿಯೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಪ್ರಭಾಕರ ಈರಪ್ಪ ಕೋರೆ, ಎಚ್. ಎಸ್. ನಸಲಾಪೂರೆ, ಶಂಕರಗೌಡ ಪಾಟೀಲ, ಉದಯ ವಾಘಮಾರೆ, ಸುಜಾತಾ ಕಾಂಬಳೆ, ಸಂಗೀತಾ ಕಾಂಬಳೆ, ಶಿವಾನಂದ ಮಯ್ರಾಯಿ, ಶೀತಲ ಮುಂಡೆ, ರುದ್ರಪ್ಪ ಸಂಗಪ್ಪಗೊಳ, ರಾಮಕೃಷ್ಣ ಪಾನಗೂಡೆ, ಇಮಾಮ ಪಟೇಲ್, ಸಾಬೀರ ಪಟೇಲ್, ಕೃಷ್ಣಾ ಜೂಗುಳೆ, ಅಬ್ಬಾಸ ಅಲಿ ಕೊಗನೊಳಿ, ಕರೆಪ್ಪ ಇಟನಾಳ, ಸಂಜು ಕಾಂಬಳೆ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Tags:

error: Content is protected !!