ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಸಮಿತಿ ರಚನೆ ಹಾಗೂ ಮರಾಠಿ ಭಾಷೆಯಲ್ಲಿ ಮತದಾರರ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ಎಂಇಎಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಾಲ್ಕು ತಿಂಗಳಿಂದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರ ಬಳಿಕ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಕುಂದುಕೊರತೆ ನಿವಾರಣೆಗೆ ಕೂಡಲೇ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು ಮತ್ತು ಮತದಾರರ ಪಟ್ಟಿಯನ್ನು ಮರಾಠಿ ಭಾಷೆಯಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಈ ಕುರಿತು ನಿರಂತರ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಮನೋಹರ ಕಿಣೇಕರ ಮಾತನಾಡಿ, ಹೊಸ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ಸಮಿತಿ ರಚಿಸುವುದಾಗಿ ಭರವಸೆ ನೀಡಲಾಗಿದೆ ಎಂದರು. ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹೆಸರು ಸೇರ್ಪಡೆಗಾಗಿ ಸೆಪ್ಟೆಂಬರ್ 17ರ ನಂತರ ಗ್ರಾಮ ಪಂಚಾಯತಿಗಳಲ್ಲಿ ಮರಾಠಿ ಭಾಷೆಯಲ್ಲಿ ಅರ್ಜಿ ಸಲ್ಲಿಸುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದು, ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಹೋರಾಟದ ಹಾದಿ ನಿರ್ಧರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಂಘಟನೆಯ ಮುಖಂಡರಾದ ಪ್ರಕಾಶ್ ಮರಗಾಳೆ ಅವರು ಜೂನ್ 22ರಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಮೋರ್ಚಾವನ್ನು ಅಧಿಕಾರಿಗಳ ಮನವಿಯ ಮೇರೆಗೆ ಕೈಬಿಡಲಾಗಿತ್ತು, ಆದರೆ ಬೇಡಿಕೆ ಈಡೇರದ ಕಾರಣ ಈಗ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದ್ದು, ಮರಾಠಿ ಭಾಷಿಕರ ಹಕ್ಕುಗಳ ರಕ್ಷಣೆಗೆ ಕಮಿಟಿ ರಚನೆ ಅತ್ಯಗತ್ಯ ಎಂದು ಮುಖಂಡರು ಆಗ್ರಹಿಸಿದ್ದಾರೆ.
ಈ ವೇಳ ಮಾಲೋಜಿರಾವ್ ಅಷ್ಟೇಕರ, ರಣಜೀತ್ ಚವ್ಹಾಣ್ ಪಾಟೀಲ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

