hubbali

ಕೆರೆ ಅಭಿವೃದ್ಧಿ ಹೆಸರಿನಲ್ಲಿ ಆರೋಗ್ಯದ ಗುತ್ತಿಗೆದಾರ ಚೆಲ್ಲಾಟ : ಗ್ರಾಮಸ್ಥರ ಆರೋಪ

Share

ಹುಬ್ಬಳ್ಳಿ ಗ್ರಾಮೀಣ ಭಾಗದ ಪಶುಪತಿಹಾಳ ಗ್ರಾಮದಲ್ಲಿ ‘ಅಮೃತ ಸರೋವರ’ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ನೂರಾರು ವರ್ಷಗಳಿಂದ ಗ್ರಾಮಸ್ಥರ ದಾಹ ತಣಿಸುತ್ತಿದ್ದ ಕುಡಿಯುವ ನೀರಿನ ಕೆರೆಗೆ ಈಗ ಕಳಪೆ ಕಾಮಗಾರಿಯ ಗ್ರಹಣ ಹಿಡಿದಿದೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾರ ಕೆರೆಗೆ ಮಟ್ಟೆ ಮಣ್ಣು ಸುರಿದು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾನೆ ಎಂದು ಆರೋಪಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ್ದಾರೆ. ಗುತ್ತಿಗೆದಾರನ ವಿರುದ್ಧ ಆಕ್ರೋಶದ ಕಟ್ಟೆಯೊಡೆದಿದ್ದು, ಈ ಕುರಿತ ಒಂದು ಸಮಗ್ರ ವರದಿ ಇಲ್ಲಿದೆ ನೋಡಿ…

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದ ಕುಡಿಯುವ ನೀರಿನ ಅಭಾವ ನೀಗಿಸಲು ‘ಅಮೃತ ಸರೋವರ’ ಯೋಜನೆಯಡಿ ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿವೆ. ಆದರೆ ಇಲ್ಲಿ “ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ” ಎನ್ನುವಂತಾಗಿದೆ. ಹುಬ್ಬಳ್ಳಿ ತಾಲೂಕಿನ ಪಶುಪತಿಹಾಳ ಗ್ರಾಮದ ಕುಡಿಯುವ ನೀರಿನ ಕೆರೆಯ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗುತ್ತಿದ್ದು, ಗ್ರಾಮ ಪಂಚಾಯತಿ ಆಡಳಿತ ಮಂಡಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನೂರಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಇದೇ ಕೆರೆಯನ್ನು ಅವಲಂಬಿಸಿರುವ ಗ್ರಾಮಸ್ಥರಿಗೆ, ಗುತ್ತಿಗೆದಾರ ಸುರಿಯುತ್ತಿರುವ ಮಟ್ಟೆ ಮಣ್ಣು ಸಾಂಕ್ರಾಮಿಕ ರೋಗ ಹರಡುವ ಭೀತಿ ಮೂಡಿಸಿದೆ.

​ನಿಯಮಗಳ ಪ್ರಕಾರ ಕೆರೆಯ ಸುತ್ತಲೂ ಮೊಹರಂ ಹಾಕಿ ಕಲ್ ಪಿಚಿಂಗ್ ಮಾಡಬೇಕಿತ್ತು. ಆದರೆ ಗುತ್ತಿಗೆದಾರ ಕಳಪೆ ಸಿಸಿ ಗೋಡೆಗಳನ್ನು ನಿರ್ಮಿಸಿದ್ದಲ್ಲದೆ, ಮೊಹರಂ ಬದಲು ಸ್ಥಳೀಯ ಮಟ್ಟೆ ಮಣ್ಣನ್ನು ತಂದು ಸುರಿದು ಕಾಮಗಾರಿ ಮುಗಿಸಲು ಹೊರಟಿದ್ದ. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಂಚಾಯಿತಿ ಅಧ್ಯಕ್ಷೆ ಸುಧಾ ಡೊಳ್ಳಿನ್, ಉಪಾಧ್ಯಕ್ಷೆ ಅಲ್ಲಾಬಿ ರಾಜಾಸಾಬ್ ನದಾಫ್ ಹಾಗೂ ಸದಸ್ಯರು ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಗುತ್ತಿಗೆದಾರನಿಗೆ ಕರೆ ಮಾಡಿದರೆ ಆತ ಉಡಾಫೆ ಉತ್ತರ ನೀಡಿದ್ದಾನೆ ಎಂದು ಆಡಳಿತ ಮಂಡಳಿ ಆರೋಪಿಸಿದೆ.

ಪಶುಪತಿಹಾಳ ಗ್ರಾಮ ಪಂಚಾಯಿತಿಗೆ ಕೆರೆ ಅಭಿವೃದ್ಧಿಯ ನೀಲನಕ್ಷೆಯಾಗಲಿ ಅಥವಾ ಯಾವುದೇ ಮಾಹಿತಿಯಾಗಲಿ ನೀಡದೆ ಗುತ್ತಿಗೆದಾರ ಮನಬಂದಂತೆ ವರ್ತಿಸುತ್ತಿದ್ದಾನೆ. ಹೀಗಾಗಿ ಆತನನ್ನು ತಕ್ಷಣವೇ ಬ್ಲಾಕ್‌ಲಿಸ್ಟ್‌ಗೆ ಸೇರಿಸಬೇಕು ಹಾಗೂ ಕೆರೆಯ ಕಾಮಗಾರಿಯನ್ನು ಮೊದಲಿನಿಂದ ಸಮರ್ಪಕವಾಗಿ ಮರು ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಗ್ರಾಮಸ್ಥರು, ಯುವಕರು ಮತ್ತು ರೈತರು ಬೀದಿಗಿಳಿದು ಉಗ್ರ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!