Chikkodi

ಅಹಿಲ್ಯಾಬಾಯಿ ಪಾಟೀಲ ಮಹಿಳಾ ಮಹಾವಿದ್ಯಾಲಯದಲ್ಲಿ ‘ಕಮಲಾ ಶೆಡಬಾಳ ಕ್ರಿಕೆಟ್ ಅಕಾಡೆಮಿ’ ಉದ್ಘಾಟನೆ

Share

ಶಿಕ್ಷಣದ ಜೊತೆಗೆ ಆರೋಗ್ಯವೂ ಅತ್ಯಂತ ಮುಖ್ಯ. ಸದೃಢ ಆರೋಗ್ಯಕ್ಕಾಗಿ ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಿ.ಟಿ.ಇ ಸಂಸ್ಥೆಯ ಉಪಾಧ್ಯಕ್ಷ ವಿಜಯ ಮಾಂಜರೆಕರ ಹೇಳಿದರು.

ಚಿಕ್ಕೋಡಿಯ ಸಿ.ಟಿ.ಇ ಸಂಸ್ಥೆಯ ಶ್ರೀಮತಿ ಅಹಿಲ್ಯಾಬಾಯಿ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ನೂತನವಾಗಿ ಆರಂಭಿಸಲಾದ ‘ಶ್ರೀಮತಿ ಕಮಲಾ ಶೆಡಬಾಳ ಕ್ರಿಕೆಟ್ ಅಕಾಡೆಮಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಶ್ರೀಮತಿ ಕಮಲಾ ಶೆಡಬಾಳ ಅವರು ಕ್ರಿಕೆಟ್ ಅಕಾಡೆಮಿ ನಿರ್ಮಾಣಕ್ಕಾಗಿ ನೀಡಿದ ₹2 ಲಕ್ಷ ದೇಣಿಗೆಯಿಂದ ಈ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ತರಬೇತಿ ಪಡೆದ ಕೋಚ್‌ಗಳನ್ನು ನೇಮಿಸಿ, ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ನಗರದ ಯುವತಿಯರಿಗೆ ಉತ್ತಮ ತರಬೇತಿ ನೀಡಲಾಗುವುದು. ಈ ಸೌಲಭ್ಯವನ್ನು ಬಳಸಿಕೊಂಡು ಗ್ರಾಮೀಣ ಭಾಗದಿಂದ ಉತ್ತಮ ಮಹಿಳಾ ಕ್ರಿಕೆಟ್ ಪಟುಗಳು ಹೊರಹೊಮ್ಮಬೇಕು ಎಂದು ವಿಜಯ ಮಾಂಜರೆಕರ ಆಶಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಚಾಲಕ ಸಂಜಯ ಆಡಕೆ, “ಇಂದಿನ ಧಾವಂತದ ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಗಮನ ಹರಿಸುವುದು ಕಡಿಮೆಯಾಗಿದೆ. ವಿದ್ಯಾರ್ಥಿಗಳು ಕೇವಲ ಅಭ್ಯಾಸಕ್ಕಷ್ಟೇ ಸೀಮಿತವಾಗದೆ ಕ್ರೀಡೆ ಮತ್ತು ವ್ಯಾಯಾಮಕ್ಕೂ ಮಹತ್ವ ನೀಡಬೇಕು. ಆರೋಗ್ಯವೇ ನಿಜವಾದ ಸಂಪತ್ತು” ಎಂದು ಕಿವಿಮಾತು ಹೇಳಿದರು.

 

ಕಾರ್ಯಕ್ರಮದ ಸಾನ್ನಿಧ್ಯ ಮತ್ತು ಉಪಸ್ಥಿತಿಯನ್ನು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕುಲಕರ್ಣಿ, ಕಾರ್ಯದರ್ಶಿ ಅರುಣ್ ಕುಲಕರ್ಣಿ, ಸಂಚಾಲಕರಾದ ಪಿ.ವಿ. ಶೆಡಬಾಳ, ವೈ.ಎಸ್. ಮಿರಜಿ, ಓಂಕಾರ ಕುಲಕರ್ಣಿ, ಸಹಕಾರ್ಯದರ್ಶಿ ಮಿಥುನ್ ದೇಶಪಾಂಡೆ, ಪ್ರಾಚಾರ್ಯ ಎಸ್.ಸಿ. ಜಕಾತಿ, ಸೌ. ಜಯಶ್ರೀ ಪಿ. ಶೆಡಬಾಳ, ವಿಜಯ ಬಿಕ್ಕಣವರ, ಪಿಯುಸಿ ಪ್ರಾಚಾರ್ಯ ಉತ್ತಮ ಶಿಂದೆ, ಪಿ.ಎ. ಕುಲಕರ್ಣಿ, ಜಿ.ಪಿ. ಇನಾಮದಾರ, ಬಿ.ಎ. ನೇಜೆ, ಡಿ.ಎಂ. ಕುಲಕರ್ಣಿ ಸೇರಿದಂತೆ ಹಲವು ಪ್ರಮುಖರು ವಹಿಸಿದ್ದರು.

ಡಾ. ಎಚ್.ಎ. ಭೋಗಲೆ ಸ್ವಾಗತಿಸಿದರು. ಶ್ರುತಿ ಪೂಜಾರಿ ಹಾಗೂ ಅಶ್ವಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Tags:

error: Content is protected !!