ಹಣಬರ ಸಮಾಜದ ಬೇಡಿಕೆಯಂತೆ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀಕೃಷ್ಣ ಭವನದ ಎರಡನೇ ಮಹಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಿಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು.


ಚಿಕ್ಕೋಡಿ ನಗರದ ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಶ್ರೀಕೃಷ್ಣ ಭವನ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಣಬರ ಬಾಂಧವರ ಸಮಗ್ರ ವಿಕಾಸ ಹಾಗೂ ಅವರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ತಾವೂ ಹಾಗೂ ಶಾಸಕ ಗಣೇಶ ಹುಕ್ಕೇರಿ ಸದಾ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಿಕ್ಕೋಡಿ ಶ್ರೀ ಚರ್ಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮೀಜಿ, ಹಣಬರ ಸಮಾಜದ ಬಾಂಧವರು ಅತೀ ಕಷ್ಟಜೀವಿಗಳು ಹಾಗೂ ಪ್ರಾಮಾಣಿಕರಾಗಿದ್ದು, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಉನ್ನತ ಮಟ್ಟಕ್ಕೇರಬೇಕು ಎಂದರು. ಈ ಭವನದ ನಿರ್ಮಾಣಕ್ಕೆ ಹುಕ್ಕೇರಿ ತಂದೆ-ಮಕ್ಕಳೊಂದಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಜಗದೀಶ ಕವಟಗಿಮಠ ಅವರ ಸಹಕಾರವೂ ಶ್ಲಾಘನೀಯ. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕ್ಷೇತ್ರದ ಎಲ್ಲಾ ಸಮುದಾಯಗಳ ಸಮಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ನೂತನ ಭವನವನ್ನು ಸಮಾಜದ ಒಳಿತಿನ ಸತ್ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ನಗರಾಧ್ಯಕ್ಷ ರಾಮಾ ಮಾನೆ, ಯುವ ಮುಖಂಡ ಅಜಯ ಕವಟಗಿಮಠ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉದ್ಘಾಟನೆಯ ಅಂಗವಾಗಿ ವಿಶೇಷ ಹೋಮ ಹಾಗೂ ನವಗ್ರಹ ಪೂಜಾ ಕಾರ್ಯಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿದವು.
ಈ ಸಂದರ್ಭದಲ್ಲಿ ಶೇಖರ್ ಮುಂಡೆ, ಸಿದ್ರಾಮ್ ಮುಂಡೆ, ಶೀತಲ್ ಮುಂಡೆ, ಸಂತೋಷ ಟವಳೆ, ರಮೇಶ್ ಚೌಡನವರ,ಮಹಾದೇವ ಕರಣುರೆ, ಸುಂದರ ಮುಂಡೆ, ದುಂಡಪ್ಪ ಬಾಡಕರ, ಹನುಮಂತಪ್ಪ ಮಧ್ಯಾಳಿ ಸೇರಿದಂತೆ ಹಣಬರ ಸಮಾಜದ ಪ್ರಮುಖ ಗಣ್ಯರು, ಹಿರಿಯರು ಹಾಗೂ ಅಪಾರ ಸಂಖ್ಯೆಯ ಸಮಾಜದ ಬಾಂಧವರು ಉಪಸ್ಥಿತರಿದ್ದರು.
