KHANAPUR

ಎಸ್ ಐಆರ್ ಅಡಿಯಲ್ಲಿ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ ಆಕ್ಷೇಪಣೆ-ಹಕ್ಕು ಮಂಡಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ : ಬಲರಾಮ ಚವ್ಹಾಣ

Share

ಎಸ್ ಐಆರ್ ಅಡಿಯಲ್ಲಿ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ; ಆಕ್ಷೇಪಣೆ-ಹಕ್ಕು ಮಂಡಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ : ಬಲರಾಮ ಚವ್ಹಾಣ.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಖಾನಾಪೂರ ತಾಲೂಕಿನ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕ್ರಿಯೆಗೆ ತಾಲೂಕಿನ ನಾಗರಿಕರು ನೀಡಿದ ಸಹಕಾರಕ್ಕೆ ಮುಖ್ಯ ಚುನಾವಣಾ ಮತದಾರರ ಪಟ್ಟಿ ನೋಂದಣಾಧಿಕಾರಿ ಬಲರಾಮ ಚವ್ಹಾಣ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಕರಡು ಮತದಾರರ ಪಟ್ಟಿಯಲ್ಲಿರುವ ಹೆಸರು, ವಿಳಾಸ ಅಥವಾ ಇತರ ವಿವರಗಳಿಗೆ ಸಂಬಂಧಿಸಿದಂತೆ ಹಕ್ಕು-ಆಕ್ಷೇಪಣೆಗಳನ್ನು ಸಲ್ಲಿಸಲು ಇಂದಿನಿಂದ ಸೆಪ್ಟೆಂಬರ್ 23, 2026ರವರೆಗೆ ಅವಕಾಶ ನೀಡಲಾಗಿದೆ.

ಈ ಕುರಿತು ಬಲರಾಮ ಚವ್ಹಾಣ ಅವರು ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸಿ, ಎಸ್ ಐಆರ್ ಪ್ರಕ್ರಿಯೆಯಲ್ಲಿ ಇದುವರೆಗೆ ನಡೆದ ಮತದಾರರ ನೋಂದಣಿ ಕುರಿತು ಮಾಹಿತಿ ನೀಡಿದರು. ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೆ ನಾಗರಿಕರು ಇದೇ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎಸ್. ಕೆ. ತಂಗೋಳಿ, ಉಪತಹಶೀಲ್ದಾರ್ ವಿ. ಆರ್. ಮ್ಯಾಗೆರಿ, ಸುನಿಲ್ ದೇಸಾಯಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಲರಾಮ ಚವ್ಹಾಣ ಅವರು ನೀಡಿದ ಮಾಹಿತಿಯ ಪ್ರಕಾರ, ಈ ಹಿಂದೆ ಖಾನಾಪೂರ ತಾಲೂಕಿನಲ್ಲಿ ಒಟ್ಟು 2,19,152 ಮತದಾರರು ಇದ್ದರು. ಎಸ್ ಐಆರ್ ಪ್ರಕ್ರಿಯೆಯ ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 1,01,866 ಪುರುಷರು, 94,879 ಮಹಿಳೆಯರು ಹಾಗೂ 4 ತೃತೀಯಲಿಂಗಿಗಳು, ಸೇರಿದಂತೆ ಒಟ್ಟು 1,96,749 ಮತದಾರರು ದಾಖಲಾಗಿದ್ದಾರೆ.

ಕರಡು ಪಟ್ಟಿಯ ಪ್ರಕ್ರಿಯೆಯಲ್ಲಿ ಒಟ್ಟು 22,403 ಮತದಾರರ ವ್ಯತ್ಯಾಸ ಕಂಡುಬಂದಿದೆ. ಇದರಲ್ಲಿ 5,902 ಮೃತ ಮತದಾರರು, 12,708 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 3,492 ಈಗಾಗಲೇ ನೋಂದಾಯಿತ ಮತದಾರರು, 300 ಗೈರುಹಾಜರಿದ್ದ ಮತದಾರರು ಹಾಗೂ ಇತರ ಕಾರಣದಿಂದ 1 ಮತದಾರ ಸೇರಿದ್ದಾರೆ. ತಾಲೂಕಿನಲ್ಲಿ ಒಟ್ಟು 319 ಮತಗಟ್ಟೆಗಳು ಇವೆ ಎಂದು ಮಾಹಿತಿ ನೀಡಲಾಗಿದೆ.

ಎಸ್ ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ Enumeration Form ಸಲ್ಲಿಸಲು ಸಾಧ್ಯವಾಗದ ಅರ್ಹ ಮತದಾರರಿಗೆ, ನಿಗದಿತ ಘೋಷಣಾಪತ್ರದೊಂದಿಗೆ ನಮೂನೆ-6 ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ.

ನಮೂನೆ-6 : ಹೊಸ ಮತದಾರರಾಗಿ ನೋಂದಣಿ.
ನಮೂನೆ-6A : ವಿದೇಶದಲ್ಲಿರುವ (Overseas) ಮತದಾರರಾಗಿ ನೋಂದಣಿ.
ನಮೂನೆ-7 : ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು.
ನಮೂನೆ-8 : ನಿವಾಸ ಬದಲಾವಣೆ, ಮತದಾರರ ದಾಖಲೆಯಲ್ಲಿನ ತಿದ್ದುಪಡಿ, EPIC ಬದಲಾವಣೆ ಅಥವಾ PwD ಗುರುತಿಗಾಗಿ.
ಈ ಎಲ್ಲಾ ನಮೂನೆಗಳು ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್‌ನಲ್ಲಿ ಲಭ್ಯವಿವೆ.ಅದರಂತೆಯೇ

ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡುವುದು, ವಿಚಾರಣೆ ನಡೆಸುವುದು, Enumeration Forms ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಹಾಗೂ ಸ್ವೀಕರಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ಇಂದಿನಿಂದ ಅಕ್ಟೋಬರ್ 22, 2026ರವರೆಗೆ ಪೂರ್ಣಗೊಳಿಸಲಾಗುವುದು.ಅದರಂತೆ ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ತೆಗೆದುಹಾಕಿದಲ್ಲಿ, ಸಂಬಂಧಪಟ್ಟ ಮತದಾರರ ನೋಂದಣಿ ಅಧಿಕಾರಿಯ ಆದೇಶದ ದಿನಾಂಕದಿಂದ 15 ದಿನಗಳೊಳಗೆ ಜಿಲ್ಲಾಧಿಕಾರಿ/ಜಿಲ್ಲಾ ದಂಡಾಧಿಕಾರಿಗಳ ಮುಂದೆ ಮೊದಲ ಮೇಲ್ಮನವಿ ಸಲ್ಲಿಸಬಹುದು.

ಮೊದಲ ಮೇಲ್ಮನವಿಯ ತೀರ್ಪಿನ ದಿನಾಂಕದಿಂದ 30 ದಿನಗಳೊಳಗೆ ಮುಖ್ಯ ಚುನಾವಣಾಧಿಕಾರಿಗಳ ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಆದ್ದರಿಂದ ಪ್ರತಿಯೊಬ್ಬ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಇತರ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಹಕ್ಕು-ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಬಲರಾಮ ಚವ್ಹಾಣ ಅವರು ಮನವಿ ಮಾಡಿದ್ದಾರೆ ಎಸ್ ಐಆರ್ ಪ್ರಕ್ರಿಯೆಯಡಿ ಹಕ್ಕು-ಆಕ್ಷೇಪಣೆಗಳು, ವಿಚಾರಣೆ ಹಾಗೂ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27, 2026ರಂದು ಪ್ರಕಟಿಸಲಾಗುವುದು.

ಅಂತಿಮ ಮತದಾರರ ಪಟ್ಟಿಯು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು ಹಾಗೂ ಮತದಾರರ ಪಟ್ಟಿಯಲ್ಲಿರುವ ಇತರ ವಿವರಗಳನ್ನು ಪರಿಶೀಲಿಸುವುದು ಮಹತ್ವದ ಜವಾಬ್ದಾರಿಯಾಗಿದೆ. ಹೆಸರು ಇಲ್ಲದಿದ್ದಲ್ಲಿ ಅಥವಾ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಅರ್ಜಿಯನ್ನು ಸಲ್ಲಿಸಬೇಕು ಎಂದು ಬಲರಾಮ ಚವ್ಹಾಣ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!